ಕಡತ ಚಿತ್ರ: ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ನಿಯೋಗವು ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸ ಕೈಗೊಳ್ಳಲಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ನವೆಂಬರ್ 23ರಂದು ನಗೋಯಾ, 24ರಂದು ಒಸಾಕಾ ಹಾಗೂ 25ರಂದು ಟೋಕಿಯೊದಲ್ಲಿ ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ಪ್ರವಾಸಕ್ಕೆ ಎರಡು ಪ್ರಮುಖ ಆದ್ಯತೆಗಳಿವೆ ಎಂದು ಪ್ರಕಟಣೆ ಹೇಳಿದೆ: ರಾಜ್ಯದಲ್ಲಿ ಜಪಾನ್ ಹೂಡಿಕೆಯನ್ನು ಮತ್ತಷ್ಟು ಬಲಪಡಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸುವುದು, ಹಾಗೂ ಜಾಗತಿಕ ಮಟ್ಟದಲ್ಲಿ ಮಾದರಿಯಾಗಿರುವ ಜಪಾನ್‌ನ ನಗರ ನಿರ್ಮಾಣ ಪದ್ಧತಿಗಳನ್ನು ಅಧ್ಯಯನ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ತಂಡದೊಂದಿಗೆ ನಗರಾಭಿವೃದ್ಧಿ ಯೋಜನೆಗಳಿಗೆ ಭೇಟಿ ನೀಡುವುದು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದು, ಕೈಗಾರಿಕಾ ಸಂವಾದಗಳನ್ನು ಮುನ್ನಡೆಸಲಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ (ರಿಪಬ್ಲಿಕ್ ಆಫ್ ಕೊರಿಯಾ) ರಾಜ್ಯದ ಹೂಡಿಕೆ ಪ್ರಚಾರ ಕಾರ್ಯಕ್ರಮಗಳ ನೇತೃತ್ವವನ್ನೂ ಅವರು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿಯೋಗದಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಇಒ ಖುಷ್ಬೂ ಗೋಯೆಲ್ ಚೌಧರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ-1 ಯತೀಶ್ ಆರ್. ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿ, ಜಿಬಿಎ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ.
ಕೈಗಾರಿಕೆ ಮತ್ತು ಹೂಡಿಕೆ ವಿಭಾಗದಲ್ಲಿ, ಮುಖ್ಯಮಂತ್ರಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿಯೋಗವು ಜಪಾನ್‌ನ ಪ್ರಮುಖ ಕಂಪನಿಗಳ ಉನ್ನತ ನಾಯಕರನ್ನು ಭೇಟಿ ಮಾಡಿ, ಅವರ ಮುಂದಿನ ಹೂಡಿಕೆ ಯೋಜನೆಗಳ ಕುರಿತು ಚರ್ಚಿಸಿ, ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳನ್ನು ಮನವರಿಕೆ ಮಾಡಿಕೊಡಲಿದೆ. ನವೆಂಬರ್ 27ರವರೆಗೆ ನಡೆಯಲಿರುವ ಈ ಕೈಗಾರಿಕಾ ಸಭೆಗಳಲ್ಲಿ, 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರು ಅರಮನೆಯಲ್ಲಿ ಇನ್ವೆಸ್ಟ್ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ 2027’ಕ್ಕೆ ಪ್ರತಿ ಕಂಪನಿಗೂ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ಮತ್ತು ಜಪಾನ್ ಎರಡೂ ಬಲಿಷ್ಠವಾಗಿರುವ ವಲಯಗಳ ಮೇಲೆ ಸಭೆಗಳು ಕೇಂದ್ರೀಕೃತವಾಗಿವೆ: ಆಟೋಮೋಟಿವ್ ಮತ್ತು ಇವಿ ಬಿಡಿಭಾಗಗಳು (ಟೊಯೋಟಾ ಮತ್ತು ಪ್ಯಾನಾಸೋನಿಕ್ ಆಟೋಮೋಟಿವ್ ಸಿಸ್ಟಮ್ಸ್), ವಿಶೇಷ ರಾಸಾಯನಿಕಗಳು ಮತ್ತು ಸುಧಾರಿತ ಸಾಮಗ್ರಿಗಳು (ಮಿತ್ಸುಬಿಷಿ ಕೆಮಿಕಲ್ ಗ್ರೂಪ್), ಔಷಧೀಯ ಕ್ಷೇತ್ರ (ಟಕೆಡಾ ಫಾರ್ಮಾಸ್ಯುಟಿಕಲ್ಸ್), ಕೈಗಾರಿಕಾ ಆಟೊಮೇಷನ್ (ಯೊಕೊಗಾವಾ ಎಲೆಕ್ಟ್ರಿಕ್) ಮತ್ತು ಉತ್ಪಾದನಾ ವಲಯದ ಹೂಡಿಕೆಗಳು (ಸುಮಿಟೊಮೊ ಕಾರ್ಪೊರೇಷನ್). ಪ್ರತಿ ಸಭೆಯಲ್ಲೂ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ, ಹಿಂದುಳಿದ ಮತ್ತು ಆದ್ಯತಾ ತಾಲ್ಲೂಕುಗಳಲ್ಲಿನ ಹೂಡಿಕೆಗಳಿಗೆ ಶೇ.20ರವರೆಗಿನ ಹೆಚ್ಚುವರಿ ಬಂಡವಾಳ ಸಬ್ಸಿಡಿ, ಕೆಐಎಡಿಬಿ ಡಿಜಿಟಲ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ ಹಾಗೂ ಪ್ರತಿ ಹೂಡಿಕೆ ಪ್ರಸ್ತಾವನೆಗೂ ಏಕಗವಾಕ್ಷಿ ಸೌಲಭ್ಯ ಸೇರಿದಂತೆ ರಾಜ್ಯದ ಹೊಸ ನೀತಿಗಳು ಮತ್ತು ಪ್ರೋತ್ಸಾಹಕ ಕ್ರಮಗಳನ್ನು ಪ್ರಸ್ತುತಪಡಿಸಲಾಗುವುದು. ಕರ್ನಾಟಕದಲ್ಲಿ ಹೂಡಿಕೆ ಮಾಡುವ ಜಪಾನ್ ಕಂಪನಿಗಳಿಗೆ ಸಾಂಸ್ಥಿಕ ಬೆಂಬಲ ಬಲಪಡಿಸುವ ಕುರಿತು ಜೆಟ್ರೋ ಕಾರ್ಯನಿರ್ವಾಹಕ ಉಪಾಧ್ಯಕ್ಷರೊಂದಿಗೂ ಸಭೆ ನಡೆಯಲಿದೆ.
ನಗರಾಭಿವೃದ್ಧಿ ವಿಭಾಗದಲ್ಲಿ, ಯೋಜಿತ, ಹೆಚ್ಚಿನ ಜನಸಾಂದ್ರತೆಯ ಮತ್ತು ಸುಸ್ಥಿರ ನಗರ ಬೆಳವಣಿಗೆಗೆ ಜಪಾನ್‌ನ ನಗರಗಳು ಜಗತ್ತಿಗೇ ಮಾದರಿ ಎಂದು ಪ್ರಕಟಣೆ ಹೇಳಿದೆ. ಜಿಬಿಎ ಅಧಿಕಾರಿಗಳೊಂದಿಗೆ ನಿಯೋಗವು ಬೆಂಗಳೂರು ಹಾಗೂ ಕರ್ನಾಟಕದ ಇತರ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅಗತ್ಯವಿರುವ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಯೋಜನೆ, ಸಮಗ್ರ ಸಾರಿಗೆ ಮತ್ತು ಸಂಚಾರ ನಿರ್ವಹಣೆ, ಹಾಗೂ ಆಧುನಿಕ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲಿದೆ. ಒಸಾಕಾ ಮತ್ತು ಟೋಕಿಯೊ ಭೇಟಿಗಳು ಹೆಚ್ಚಿನ ಜನಸಾಂದ್ರತೆಯ ಮಹಾನಗರಗಳನ್ನು ಜಪಾನ್ ಹೇಗೆ ಯೋಜಿಸುತ್ತದೆ, ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದರ ನೇರ ಅನುಭವ ನೀಡಲಿವೆ; ಟೋಕಿಯೊ ಸಮಗ್ರ ಸಾರಿಗೆ ಮತ್ತು ನಿಲ್ದಾಣ-ಕೇಂದ್ರಿತ ಪುನರಾಭಿವೃದ್ಧಿಗೆ ಜಾಗತಿಕ ಮಾದರಿಯಾಗಿದ್ದರೆ, ಪಶ್ಚಿಮ ಜಪಾನ್‌ನ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾದ ಒಸಾಕಾ ಬೃಹತ್ ಪ್ರಮಾಣದ ನಗರ ನವೀಕರಣ ಮತ್ತು ಮಹಾನಗರ ಯೋಜನೆಯಲ್ಲಿ ಪಾಠ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಭೇಟಿಯ ಭಾಗವಾಗಿ ನಿಯೋಗವು ಜಪಾನ್‌ನ ಪ್ರಮುಖ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಸಂಸ್ಥೆ ನಿಕ್ಕೆನ್ ಸೆಕ್ಕೆಯ್ ಪ್ರತಿನಿಧಿಗಳೊಂದಿಗೆ ‘ಟೋಕಿಯೊ ಮಿಡ್‌ಟೌನ್ ರೊಪ್ಪೊಂಗಿ’ಗೆ ಭೇಟಿ ನೀಡಲಿದೆ; ಈ ಯೋಜನೆ ನಗರ ಪುನರಾಭಿವೃದ್ಧಿ, ಸಾರಿಗೆ-ಆಧಾರಿತ ಅಭಿವೃದ್ಧಿ, ಭೂ ಮರುಹೊಂದಾಣಿಕೆ, ಮಿಶ್ರ ಭೂ ಬಳಕೆ ಮತ್ತು ನಗರ ಹಸಿರು ಪ್ರದೇಶಗಳ ನಿರ್ವಹಣೆಗೆ ಉತ್ತಮ ನಿದರ್ಶನ ಎಂದು ಪ್ರಕಟಣೆ ವಿವರಿಸಿದೆ. ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ನಗರ ಮೂಲಸೌಕರ್ಯ ನಿರ್ಮಾಣದಲ್ಲಿ ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಸಾಮರ್ಥ್ಯ ಮತ್ತು ಪ್ರಮುಖ ಯೋಜನೆಗಳನ್ನು ಅರಿಯಲು ಟೋಕಿಯೊದಲ್ಲಿರುವ ಅದರ ಪ್ರಧಾನ ಕಚೇರಿಯಲ್ಲಿ ಹಿರಿಯ ಆಡಳಿತ ಮಂಡಳಿಯೊಂದಿಗೂ ನಿಯೋಗ ಸಭೆ ನಡೆಸಲಿದೆ.
ಬೆಂಗಳೂರಿನ ಸಂಚಾರ ವ್ಯವಸ್ಥೆ ಸುಧಾರಿಸಲು ಜಪಾನ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ನಗರ ಯೋಜನೆಗಳನ್ನು ಅಧ್ಯಯನ ಮಾಡಿ ಉತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶವಿದೆ ಎಂದು ಶಿವಕುಮಾರ್ ಅವರು ಶುಕ್ರವಾರ ಲಗ್ಗೆರೆಯಲ್ಲಿ ಹೇಳಿದ್ದರು. ಹಿಂದಿನ ವರದಿಯನ್ನು ಓದಿ.
