Home ಬೆಂಗಳೂರು ನಗರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

36
0
Committed for North Karnataka's development Basavaraj Bommai

ಬೆಳಗಾವಿ:

ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯ ಕೆ.ಎಲ್.ಇ ಸೊಸೈಟಿಯಲ್ಲಿ ವಾಯುವ್ಯ ಶಿಕ್ಷಕ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

ಸೂಕ್ತ ಅಭ್ಯರ್ಥಿಗಳನ್ನು ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದರೆ ಅವರ ಸಲಹೆ ಸೂಚನೆಗಳನ್ನು ಪಡೆದು ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆದ್ದರಿಂದ ಮೊದಲನೇ ಪ್ರಾಶಸ್ತ್ಯ ಮತವನ್ನು ಅರುಣ್ ಶಹಪುರ ಹಾಗೂ ಹನುಮಂತರ ನಿರಾಣಿಯವರಿಗೆ ನೀಡಬೇಕು. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಿಮ್ಮನ್ನು ನಾವು ನಿರಾಸೆಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ಅಭಿವೃದ್ಧಿಯಲ್ಲಿ ಕೆ.ಎಲ್.ಇ ಸೊಸೈಟಿ ಕೊಡುಗೆ ಅಪಾರ

ಕರ್ನಾಟಕದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಯೋಜನೆಗಳು ಹಾಗೂ ಉತ್ತರ ಕರ್ನಾಟಕದಲ್ಲಿನ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಬೆಳಗಾವಿಯ ಕೆ.ಎಲ್.ಇ ಸೊಸೈಟಿಯ ಕೊಡುಗೆ ಅಪಾರವಾದುದು. ಯಾವ ಸಮಾಜದಲ್ಲಿ ಶಿಕ್ಷಣವಿರುತ್ತದೆಯೋ ಅದು ಬೆಳೆಯುತ್ತದೆ. ಶಿಕ್ಷಣ ಮತ್ತು ಜ್ಞಾನ ಮಾತ್ರ ಒಂದು ಸಂಸ್ಕಾರ ಭರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಕೆಎಲ್‍ಇ ಸೊಸೈಟಿಗೆ ಬಹಳ ದೊಡ್ಡ ಇತಿಹಾಸವಿದೆ. ಚುನಾಯಿತ ಅಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಅವರ ಸ್ಥಾನ ಅತ್ಯಂತ ಗೌರವಯುತವಾದ ಸ್ಥಾನ. ಪ್ರಭಾಕರ್ ಕೋರೆಯವರ ನೇತೃತ್ವದಲ್ಲಿ ಕೆಎಲ್‍ಇ ಸಂಸ್ಥೆಯ ಅಭಿವೃದ್ದಿಯ ಪಯಣ ಇನ್ನೂ ಮುಂದುವರೆದಿದೆ. 34 ಸಂಸ್ಥೆಗಳಿದ್ದ ಸೊಸೈಟಿ ಮೂರು ದಶಕಗಳಲ್ಲಿ 278 ಸಂಸ್ಥೆಗಳಾಗಿವೆ. ಇದೊಂದು ವಿಶ್ವ ದಾಖಲೆ. ಈ ದೇಶದ ಗಡಿದಾಟಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಇದು ಶಿಕ್ಷಣದಲ್ಲಿ ನಾಯಕತ್ವವನ್ನು ತೋರಿಸುತ್ತದೆ.

ಪ್ರಭಾಕರ್ ಕೋರೆಯಂತಹವರು ನೂರಾರು ಜನ ಬಂದರೆ ಈ ದೇಶದ ಶೈಕ್ಷಣಿಕ ಚಿತ್ರಣವೇ ಬದಲಾಗುತ್ತದೆ. ವೈಜ್ಞಾನಿಕ ಚಿಂತನೆಯುಳ್ಳ ಸಮಾಜದ ನಿರ್ಮಾಣ ಶೈಕ್ಷಣಿಕ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಬೆಳೆಯಬೇಕು ಎಂದು ತಿಳಿಯುವ ಸಲುವಾಗಿ ಈ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ಮಾಡಬೇಕು ಎಂದರು. ಪ್ರಭಾಕರ್ ಕೋರೆಯವರು ಸೊಸೈಟಿಯ ವಿಚಾರದಲ್ಲಿ ಮಾತೃಹೃದಯದ ಅಧ್ಯಕ್ಷರಾಗಿ ಅಧ್ಬುತ ಸೇವೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಶಿಕ್ಷಣಕ್ಕೆ ಆದ್ಯತೆ

ನನ್ನ ಸರ್ಕಾರ ಶಿಕ್ಷಣಕ್ಕೆ ಆದ್ಯೆತ ನೀಡಿದೆ. ಒಂದೇ ವರ್ಷದಲ್ಲಿ ಏಳು ಸಾವಿರ ಶಾಲಾ ಕೊಠಡಿಗಳನ್ನು ಗ್ರಾಮೀಣ ನಿರ್ಮಿಸಲು ಅನುದಾನವನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ. ಇದೇ ವರ್ಷ ಪೂರ್ಣಗೊಳಿಸಲಾಗುವುದು. ಈ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಅನುಮೋದನೆ ನೀಡಲಾಗಿದೆ. ಮಾದರಿ ಶಾಲೆಗಳನ್ನು ಮತ್ತು ಉನ್ನತ ಶಿಕ್ಷಣಕ್ಕೂ ಮಹತ್ವ ನೀಡಲಾಗಿದೆ. ಆರು ಸಾವಿರ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.

ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಐದು ವರ್ಷಗಳಲ್ಲಿ ಅವೆಲ್ಲವನ್ನೂ ಮೇಲ್ದರ್ಜೆಗೇರಿಸಲಾಗುವುದು, ಇದೇ ವರ್ಷಗಳಲ್ಲಿ ವಿದೇಶೀ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು.ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಉತ್ಕøಷ್ಟತಾ ಕೇಂದ್ರ ಸ್ಥಾಪನೆ ಮಾಡಲು ಇದೇ ವರ್ಷ ಕೆಲಸ ಪ್ರಾರಂಭವಾಗಿದೆ. ಆರ್ ಅಂಡ್ ಡಿ ಸಂಸ್ಥೆಗಳನ್ನು ಗ್ಯಾರೇಜಿನಿಂದ ಸಂಸ್ಥೆಗಳವರೆಗೆ ಉತ್ತೇಜಿಸಲು ಆರ್ ಅಂಡ್ ಡಿ ನೀತಿಯನ್ನು ರೂಪಿಸಲಾಗಿದೆ. ದೊಡ್ಡ ಬದಲಾವಣೆಯನ್ನು ಶಿಕ್ಷಣದಲ್ಲಿ ತರಲಾಗುತ್ತಿದೆ. ಏಳು ನೂತನ ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಬೇರ್ಯಾವ ರಾಜ್ಯವೂ ಇದನ್ನು ಮಾಡುತ್ತಿಲ್ಲ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗಿದೆ. ಜ್ಞಾನ ನೀಡಿದರೆ ಮುಂದಿನದೆಲ್ಲವೂ ಬದಲಾಗುತ್ತದೆ ಎನ್ನುವುದು ನಮ್ಮ ಸರ್ಕಾರದ ನಂಬಿಕೆ. ಶಿಕ್ಷಣ ಪರವಾದ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಹತ್ವ ಕೊಡುವ ಸರ್ಕಾರ ನಮ್ಮದು. ಒಂದು ತಿಂಗಳಲ್ಲಿ 1 ಲಕ್ಷ ನಾಲ್ಕು ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜ್ಞಾನದ, ಕೌಶಲ್ಯಯುತ ಕೇಂದ್ರ. ಬೆಂಗಳೂರಿನ ನಂತರ ಬಹು ಮುಖ್ಯ ನಗರವಾಗಿರುವ ನಗರ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಾಹಪುರ, ವಾಯುವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಪರವಾಗಿ ಅವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here