
ಬೆಂಗಳೂರು:
ಶಿವರಾಂ ಕಾರಂತ ಬಡಾವಣೆಗೆ ಜಮೀನು ಕಳೆದುಕೊಂಡಿರುವವರಿಗೆ ಆದ್ಯತೆ ಮೇರೆಗೆ ಪರಿಹಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದರು.
ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯ ಪ್ರದೇಶದಲ್ಲಿ ಶನಿವಾರ ವೀಕ್ಷಣೆ ನಡೆಸಿದ ನಂತರ ಉಪಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವರಾಂ ಕಾರಂತ ಬಡಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ನಮ್ಮ ತೀರ್ಮಾನಗಳ ಬಗ್ಗೆ ಸುಪ್ರೀಂ ಕೋರ್ಟ್ ರಚನೆ ಮಾಡಿರುವ ಸಮಿತಿ ಜತೆಗೂ ನಮ್ಮ ತೀರ್ಮಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಡಿಎ ಅಧಿಕಾರಿಗಳು ತೀರ್ಮಾನ ಸಮಂಜಸವಾಗಿದೆ ಎಂದು ಒಪ್ಪಿದ್ದಾರೆ ಎಂದು ಅವರು ಹೇಳಿದರು.
ನಿವೇಶನ ಹಂಚಿಕೆ ಯಾವಾಗ ಎಂಬ ಪ್ರಶ್ನೆಗೆ, “ನಿವೇಶನ ಹಂಚಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಿವೇಶನ ಹಂಚಿಕೆ ಬಳಿಕ ಉಳಿದ ಕೆಲಸ ಜಾರಿ ಆಗಬೇಕು ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಎಷ್ಟು ಎಕರೆ ಜಾಗದಲ್ಲಿ ಬಡಾವಣೆ ಕಾಮಗಾರಿ ನಡೆಯುತ್ತಿದೆ ಎಂದು ಕೇಳಿದಾಗ, “ಸದ್ಯಕ್ಕೆ 2500 ಎಕರೆ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಉಳಿದ ಜಾಗದ ವಿಚಾರವಾಗಿ ಕಂದಾಯ ಅಧಿಕಾರಿಗಳ ಜತೆ ಮಾತನಾಡಿ ಕಾನೂನು ತೊಡಕಿನ ಬಗ್ಗೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.

ರೈತರಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂಬ ಕೂಗಿನ ಬಗ್ಗೆ ಕೇಳಿದಾಗ, “ರೈತರಿಗೆ ಸೂಕ್ತ ಬೆಲೆ ಸಿಗಬೇಕು. ಅವರಿಗೆ ನ್ಯಾಯ ಒದಗಿಸಲು ನಾನು ಶ್ರಮಿಸುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾವು ಅವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ನಾನು ತೀರ್ಮಾನ ಮಾಡಲು ಆಗುವುದಿಲ್ಲ” ಎಂದು ತಿಳಿಸಿದರು.
ಇಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಕ್ರೀಡಾಂಗಣ ಮಾಡಲು ಜಾಗ ನಿಗದಿ ಮಾಡಿದ್ದಾರೆ. ಈ ಜಾಗ ನಿಗದಿ ಮಾಡಿರುವುದು ನನಗೆ ಸಮಾಧಾನ ಇಲ್ಲ.
45 ಮೀಟರ್ ರಸ್ತೆ ಪಕ್ಕದಲ್ಲಿ ಪಾರ್ಕ್ ಇರುವ ಜಾಗದಲ್ಲಿ ಕ್ರೀಡಾಂಗಣ ಇರಬೇಕು ಎಂದು ಸೂಚನೆ ನೀಡಿದ್ದೇನೆ. ಮುಂದೆ ಮೆಟ್ರೋ ಮಾರ್ಗ ಬಂದರೆ ಅದರ ಪಕ್ಕ ಕ್ರೀಡಾಂಗಣ ಇರಬೇಕು.
ಈ ಕ್ರೀಡಾಂಗಣಕ್ಕೆ 25-45 ಎಕರೆ ಜಾಗ ಮೀಸಲು ಇಡಲಾಗಿದೆ.
ಇನ್ನು 45 ಮೀಟರ್ ರಸ್ತೆ ಸಮೀಪ ಯಾರಿಗೂ ನಿವೇಶನವನ್ನು ನೇರ ಹಂಚಿಕೆ ಮಾಡಬಾರದು ಎಂಬ ಸೂಚನೆ ನೀಡಿದ್ದೇನೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗಬೇಕು. ಇದರಿಂದ ಬಿಡಿಎ ಹಾಗೂ ಸರ್ಕಾರಕ್ಕೆ ಲಾಭವಾಗುವಂತೆ ಇರಬೇಕು. ಇದಕ್ಕಾಗಿ ನೀತಿ ರೂಪಿಸುವಂತೆ ತಿಳಿಸಿದ್ದೇನೆ.
ಭೂಮಿ ಕಳೆದುಕೊಂಡ ರೈತರಿಗೆ ಉತ್ತಮ ಬೆಲೆ ಸಿಗಬೇಕು. ಅದಕ್ಕಾಗಿ ಈ ಮಹತ್ವವಾದ ತೀರ್ಮಾನ ಕೈಗೊಂಡಿದ್ದೇವೆ.
ಈ ಬಡಾವಣೆಯ ಬಳಿಯೇಐಟಿ ಹಬ್ ಮಾಡಲು ಜಾಗ ಮೀಸಲು ಇಡುವಂತೆ ನಿರ್ದೇಶನ ನೀಡಿದ್ದೇವೆ ಎಂದು ಅವರು ಹೇಳಿದರು.