Home ರಾಜಕೀಯ ಅನ್ನದಾತನಿಗೆ ಪಿಂಚಣಿ ಸೌಲಭ್ಯಕ್ಕೆ ಸಂಸತ್ತಿನಲ್ಲಿ ಡಿ.ಕೆ. ಸುರೇಶ್ ಆಗ್ರಹ

ಅನ್ನದಾತನಿಗೆ ಪಿಂಚಣಿ ಸೌಲಭ್ಯಕ್ಕೆ ಸಂಸತ್ತಿನಲ್ಲಿ ಡಿ.ಕೆ. ಸುರೇಶ್ ಆಗ್ರಹ

155
0
Congress alone MP from Karnataka DK Suresh demands pension facility for Farmers
ಸಂಸದ ಡಿಕೆ ಸುರೇಶ್ (DK Suresh)

ಪ್ರತ್ಯೇಕ ಕೃಷಿ ಬಜೆಟ್ ಸಾಧ್ಯವಿಲ್ಲ ಎಂದ ಕೇಂದ್ರ ಸರಕಾರ

ನವದೆಹಲಿ:

‘ರೈತ ಈ ದೇಶ ಹಾಗೂ ದೇಶದ ಆರ್ಥಿಕತೆಯ ಬೆನ್ನೆಲುಬು. ಆದರೆ ರೈತರ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ. ರೈತರಿಗೆ ಕಮಿಷನ್ ಸಿಗುವುದಿಲ್ಲ, ವಯಸ್ಸಾದರೂ ನಿವೃತ್ತಿ ಎಂಬುದೂ ಇಲ್ಲ, ಪಿಂಚಣಿಯೂ ಸಿಗುವುದಿಲ್ಲ. ರೈತ ತನ್ನ ಜೀವನದ ಕೊನೆ ಕ್ಷಣದವರೆಗೂ ದುಡಿಯುತ್ತಾನೆ.

ದೇಶದ ಶೇ.60 ರಷ್ಟು ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಬೆಳೆಗೆ ಉತ್ತಮ ಬೆಲೆಯೂ ಸಿಗುತ್ತಿಲ್ಲ, ಸ್ಥಿರ ಮಾರುಕಟ್ಟೆಯೂ ಇಲ್ಲ. ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ವಿಭಿನ್ನ ಶ್ರೇಣಿಗಳಿದ್ದು, ಅವುಗಳ ನಡುವೆ ಭಾರೀ ವ್ಯತ್ಯಾಸವಿದೆ. ಕೇವಲ 23 ಬೆಳೆಗಳು ಮಾತ್ರ ಈ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ರೈತರಿಗೆ ನಿವೃತ್ತಿ ಹಾಗೂ ಪಿಂಚಣಿ ನೀಡಲು ಸರ್ಕಾರ ಬದ್ಧವಾಗಿದೆಯೇ?’ ಎಂದು ಸಂಸದ ಡಿ.ಕೆ. ಸುರೇಶ್ ಅವರು ಸಂಸತ್ತಿನಲ್ಲಿ ಕೃಷಿ ಸಚಿವರನ್ನು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು, ‘ಮುಂದಿನ ದಿನಗಳಲ್ಲಿ ದೇಶದ ರೈತರ ಆದಾಯ ಹೆಚ್ಚಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರದೃಷ್ಟಿ ಹೊಂದಿದ್ದಾರೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಳ, ರೈತರಿಗೆ ಭದ್ರತೆ ನೀಡಲು ಕೃಷಿ ಜತೆಗೆ ತಂತ್ರಜ್ಞಾನ ಜೋಡಣೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ. ಆ ಪ್ರಕಾರವಾಗಿ 2013-14ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 27,662.67 ಕೋಟಿ ಅನುದಾನ ನೀಡಿದ್ದು, 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಅನುದಾನವನ್ನು 1,32,513.62 ಕೋಟಿಗೆ ಹೆಚ್ಚಿಸಲಾಗಿದೆ. ಈಗಾಗಲೇ ವಯಸ್ಸಾದ ರೈತರಿಗೆ ಪಿಂಚಣಿ ನೀಡಲು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ರೈತರು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅವರ ವಯಸ್ಸಿನ ಆಧಾರವಾಗಿ 3 ಸಾವಿರ ರೂಪಾಯಿಯಷ್ಟು ಪಿಂಚಣಿ ನೀಡಲಾಗುತ್ತದೆ’ ಎಂದು ಉತ್ತರಿಸಿದರು.

ಇದಕ್ಕೂ ಮುನ್ನ ಸಂಸದ ಡಿ.ಕೆ. ಸುರೇಶ್ ಅವರು, ‘ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು ಹಾಗೂ ರೈತರಿಗೆ ಭದ್ರತೆ ಒದಗಿಸಲು ಕೇಂದ್ರ ಕೃಷಿ ಸಚಿವಾಲಯ ಪ್ರತ್ಯೇಕವಾಗಿ ವಾರ್ಷಿಕ ಬಜೆಟ್ ಮಂಡಿಸುವ ಪ್ರಸ್ತಾಪ ಅಥವಾ ಉದ್ದೇಶ ಹೊಂದಿದೆಯೇ? ಒಂದು ವೇಳೆ ಆ ಉದ್ದೇಶವಿದ್ದರೆ, ಆ ಬಗ್ಗೆ ಮಾಹಿತಿ ನೀಡಿ’ ಎಂದು ಲಿಖಿತ ರೂಪದ ಪ್ರಶ್ನೆ ಕೇಳಿದ್ದರು.

ಇದಕ್ಕೆ ಲಿಖಿತ ಉತ್ತರ ನೀಡಿದ್ದ ಸಚಿವಾಲಯ, ‘ಕೃಷಿಗೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್ ಮಂಡಿಸುವ ಯಾವುದೇ ಪ್ರಸ್ತಾಪ ಸಚಿವಾಲಯದ ಮುಂದೆ ಇಲ್ಲ. ಆದರೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ.

2013-14ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 27,662.67 ಕೋಟಿ ಅನುದಾನ ನೀಡಿದ್ದು, 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಅನುದಾನವನ್ನು 1,32,513.62 ಕೋಟಿಗೆ ಹೆಚ್ಚಿಸಲಾಗಿದೆ. ಆಮೂಲಕ ಶೇ.379 ರಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ’ ಎಂದು ಉತ್ತರಿಸಿದ್ದರು.

LEAVE A REPLY

Please enter your comment!
Please enter your name here