Home ರಾಜಕೀಯ ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ : ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ : ಡಿ.ಕೆ.ಶಿವಕುಮಾರ್

12
0

ಬೆಂಗಳೂರು : ಮಾಧ್ಯಮಗಳಿಗೆ ನೀಡಿದ ಜಾಹಿರಾತು ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿಯವರು ಸುಳ್ಳು ಕೇಸ್ ದಾಖಲಿಸಿರುವುದು ಯಾವ ರಾಜಕಾರಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾನೂನು ಪ್ರಕ್ರಿಯೆ ದ್ವೇಷದ ರಾಜಕಾರಣ, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಹೋದ ನಂತರ ಈ ಬೆಳವಣಿಗೆ ನಡೆಯುತ್ತಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಟೀಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶುಕ್ರವಾರ ನಗರದ ಕಬ್ಬನ್ ಪಾರ್ಕ್‍ನಲ್ಲಿರುವ ಬಾಲಭವನ ಬಳಿ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಾನು ಆ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಪಡೆದಿಲ್ಲ. ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ. ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಿದರೆ ವಿಚಾರ ಎಲ್ಲೆಲ್ಲೋ ಹೋಗುತ್ತದೆ. ಈ ವಿಚಾರದಲ್ಲಿ ನನಗೂ ಅಯ್ಯೋ ಎನಿಸುತ್ತದೆ. ಇಂತಹ ಕಠಿಣ ಪರಿಸ್ಥಿತಿಯನ್ನು ನಾವು ಅನುಭವಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ನ್ಯಾಯಾಲಯದ ಮುಂದೆ ಹಾಜರಾದರು. ಅವರ ವಿರುದ್ಧ ಕೇಸ್ ಹಾಕಿರುವುದು ಯಾವ ರಾಜಕಾರಣ?. ಬಿಜೆಪಿಯ ವಿರುದ್ಧದ ಜಾಹೀರಾತಿಗೂ ರಾಹುಲ್ ಗಾಂಧಿ ಅವರಿಗೂ ಏನು ಸಂಬಂಧ?. ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಆ ಜಾಹೀರಾತು ಕೊಟ್ಟಿದ್ದು ರಾಹುಲ್ ಗಾಂಧಿ ಅವರೇ? ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾ ಅಥವಾ ಕೆಪಿಸಿಸಿ ಅಧ್ಯಕ್ಷರಾ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಾಗೂ ಮಾಧ್ಯಮಗಳ ವರದಿ ಆಧರಿಸಿ ಆ ಜಾಹೀರಾತನ್ನು ಕೆಪಿಸಿಸಿ ವತಿಯಿಂದ ನಾನು ಕೊಟಿದ್ದೆ. ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಈ ಕೇಸ್ ಹಾಕಿಸುವಾಗ ವಿಜಯೇಂದ್ರಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ?. ನಾವು ಅವರಂತೆ ನೀಚ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ಸದಾ ದ್ವೇಷ ಮಾಡುತ್ತಾರೆ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಶಿವಕುಮಾರ್ ತಿಳಿಸಿದರು.

2028ಕ್ಕೆ ಮತ್ತೆ ನಮ್ಮ ಸರಕಾರ ತರುವುದು ನನ್ನ ಜವಾಬ್ದಾರಿ : ಒಕ್ಕಲಿಗ ನಾಯಕರ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ನಮ್ಮ ಸಮಾಜದ ಬಗ್ಗೆ, ಲೋಕಸಭೆ ಚುನಾವಣೆ ಮತದಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಸೋತಿದ್ದು, ಸೋಲನ್ನು ಒಪ್ಪಿದ್ದೇವೆ. ರಾಜಕಾರಣದಲ್ಲಿ ಇದು ಸಹಜ ಎಂದರು.

ನಮ್ಮ ಚಲುವರಾಯಸ್ವಾಮಿ, ಬಾಲಕೃಷ್ಣ 50 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈಗ ಅವರು ಮತ್ತೆ ಗೆದ್ದಿದ್ದಾರೆ. ಈ ಸೋಲು ಶಾಶ್ವತವಲ್ಲ. ಜನರ ಭಾವನೆ, ಆಲೋಚನೆ ಆರು ತಿಂಗಳಿಗೆ ಬದಲಾಗುತ್ತದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಕೇವಲ 1 ಸ್ಥಾನ ಗೆದ್ದಿತ್ತು. ಈಗ 9 ಸ್ಥಾನ ಗೆದ್ದಿದೆ. ಇನ್ನು ನಾಲ್ಕೈದು ಕ್ಷೇತ್ರ ನಾವು ನಿರೀಕ್ಷೆ ಮಾಡಿದ್ದೆವು. 2028ಕ್ಕೆ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ನಾನು, ಸಿದ್ದರಾಮಯ್ಯ, ಎಲ್ಲ ಸಚಿವ ಸಂಪುಟ ಸದಸ್ಯರು ಒಟ್ಟಾಗಿ ದುಡಿದು ಈ ಸರಕಾರ ಮತ್ತೆ ತರುತ್ತೇವೆ ಎಂದು ಅವರು ಹೇಳಿದರು.

ನಟ ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ನಾನು ವಿಚಾರಿಸಿದ್ದೇನೆ. ಪ್ರಕರಣದಲ್ಲಿ 13 ಆರೋಪಿಗಳಿದ್ದು, ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಕ್ಯಾಮೆರಾ ಹಿಡಿದಿರುತ್ತೀರಿ, ಪೊಲೀಸರಿಗೆ ಸ್ವತಂತ್ರವಾಗಿ ವಿಚಾರಣೆ ನಡೆಸಲು ಆಗುತ್ತಿಲ್ಲ ಎಂದು ಶಾಮಿಯಾನ ಹಾಕಿಕೊಂಡಿದ್ದಾರೆ. ಈ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಗೃಹ ಸಚಿವರಿಂದ ಹಿಡಿದು ಯಾರೊಬ್ಬರೂ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here