Home ಬೆಂಗಳೂರು ನಗರ ಶೋಷಿತರ ಪಾಲಿನ ಬೆಳಕಾಗಿದ್ದ ಡಾ.ಅಂಬೇಡ್ಕರ್‌ ಅವರನ್ನು ಶೋಷಣೆ ಮಾಡಿದ ಕಾಂಗ್ರೆಸ್‌: ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಶೋಷಿತರ ಪಾಲಿನ ಬೆಳಕಾಗಿದ್ದ ಡಾ.ಅಂಬೇಡ್ಕರ್‌ ಅವರನ್ನು ಶೋಷಣೆ ಮಾಡಿದ ಕಾಂಗ್ರೆಸ್‌: ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

45
0

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂವಿಧಾನ ಶಿಲ್ಪಿಯ ಜಯಂತಿ

ಬೆಂಗಳೂರು:

ಶೋಷಿತರಿಗೆ ಬೆಳಕಾಗಿ ಮೂಡಿಬಂದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಮ್ಮ ರಾಜಕೀಯ ವ್ಯವಸ್ಥೆ, ಅದರಲ್ಲೂ ನೆಹರು ಕೃಪಾಪೋಷಿತ ರಾಜಕೀಯ ವ್ಯವಸ್ಥೆ ಬಹಳ ಶೋಷಣೆಗೆ ಈಡು ಮಾಡಿತು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ ದಲ್ಲಿಂದು ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಡಿಸಿಎಂ ಮಾತನಾಡಿದರು.

ಬಾಬಾ ಸಾಹೇಬರನ್ನು ಕಾಂಗ್ರೆಸ್‌ ಕೆಟ್ಟದಾಗಿ ನಡೆಸಿಕೊಂಡಿತು ಎಂಬುದು ಅತ್ಯಂತ ಕಹಿಯಾದ ಸಂಗತಿ. ಅವರ ವಿರುದ್ಧ ಷಡ್ಯಂತ್ರವನ್ನು ಹೂಡಿದ ಕಾಂಗ್ರೆಸ್‌ ಪಕ್ಷ 1952ರ ಮಹಾಚುನಾವಣೆಯಲ್ಲಿ ಅವರು ಸೋಲುವಂತೆ ಮಾಡಿತು. ಅದರ ಮರುವರ್ಷ ನಡೆದ ಮರು ಚುನಾವಣೆಯಲ್ಲೂ ಅವರನ್ನು ವ್ಯವಸ್ಥಿತವಾಗಿ ಸೋಲಿಸಲಾಗುತ್ತದೆ. ಕಾಂಗ್ರೆಸ್‌ ಪಕ್ಷ ಅವರು ಸೋಲುವಂತೆ ವ್ಯವಸ್ಥಿತವಾಗಿ ನೋಡಿಕೊಂಡಿತು ಎಂದು ದೂರಿದರು.

ರಾಜಕೀಯ ತಜ್ಞ, ಹಣಕಾಸು ತಜ್ಞರಾದ ಡಾ.ಅಂಬೇಡ್ಕರ್ ಅವರು ರಾಷ್ಟ್ರಪತಿ ಮತ್ತು ಪ್ರಧಾನಿ ಆಗುವ ಅರ್ಹತೆ ಇತ್ತು. ಅವರ ಜನಪ್ರಿಯತೆಯನ್ನು ಇತರ ಮುಖಂಡರು ಸಹಿಸಿಕೊಳ್ಳಲಿಲ್ಲ. ಅವರ ರಾಜಕೀಯ ಶ್ರೇಷ್ಠತೆಯನ್ನು ಸಹಿಸದ ಕಾಂಗ್ರೆಸ್ ಮುಖಂಡರು ಅವರು ಎರಡು ಬಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ, ಅವರನ್ನು ಸೋಲಿಸಿದರು. ಇದು ನಮ್ಮ ದೇಶಕ್ಕಾದ ದೊಡ್ಡ ನಷ್ಟ ಎಂದು ಡಿಸಿಎಂ ವಿವರಿಸಿದರು.

ಡಾ.ಅಂಬೇಡ್ಕರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷದವರಿಗೆ ಆ ಕುರಿತು ಪಶ್ಚಾತ್ತಾಪ ಇಲ್ಲ. ಈಗಲಾದರೂ ಅವರು ಡಾ. ಅಂಬೇಡ್ಕರ್ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಡಾ.ಅಂಬೇಡ್ಕರ್ ಅವರ ಸಂವಿಧಾನದ ಅಂಶಗಳನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗಲಿದೆ. ಈ ವಿಚಾರದಲ್ಲಿ ಇತರ ಪಕ್ಷಗಳ ಅಪಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯಾದ ಅವರು ಜ್ಞಾನಾರ್ಜನೆಗೆ ತಮ್ಮನ್ನು ಸಮರ್ಪಿಸಿಕೊಂಡವರು. ಸಮಾಜ ಮತ್ತು ದೇಶದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕೊಡುವ ಶ್ರೇಷ್ಠ ಸಂವಿಧಾನವನ್ನು ಅವರು ರಚಿಸಿದ್ದಾರೆ. ಸರ್ವಶ್ರೇಷ್ಠ ಸಂವಿಧಾನ ನಮ್ಮದು. ಅವರ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತದೆ. ನವ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅತ್ಯಮೂಲ್ಯ ಎಂದು ಅವರು ತಿಳಿಸಿದರು.

150 ದೇಶಗಳಲ್ಲಿ ಡಾ. ಅಂಬೇಡ್ಕರ್ ಜಯಂತಿ

ಪ್ರಪಂಚದ 150 ದೇಶಗಳಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಅವರೊಬ್ಬ ಮಹಾನ್ ಸಾಧಕ ಎಂಬುದಕ್ಕೆ ಇದೇ ಸಾಕ್ಷಿ ಅವರ ಮೇಧಾವಿತನ ನಮಗೆ ಪ್ರೇರಣೆ ಆಗಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಮನೆಯಲ್ಲೂ ಡಾ.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಬಿಜೆಪಿ ಡಾ.ಅಂಬೇಡ್ಕರ್ ಅವರಿಗೆ ಗೌರವ ನೀಡುತ್ತಿದೆ. ಇದನ್ನು ಬೇರೆ ಪಕ್ಷದವರೂ ಅನುಸರಿಸಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕರು ಆದ ಜಿ.ಎನ್. ನಂಜುಂಡಸ್ವಾಮಿ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರಾದ ವೆಂಕಟೇಶ್, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here