ಬೆಂಗಳೂರು:
ಕಾಂಗ್ರೆಸ್ ದಿವಾಳಿಯಾಗಿದ್ದು, ಕಾಂಗ್ರೆಸ್ ಗೆ ಮಸ್ಕಿಯಲ್ಲಿ ಅಭ್ಯರ್ಥಿ ಸಿಕ್ಕಿಲ್ಲ ಎನ್ನುವುದೇ ನಾಚಿಕೆಗೇಡು ಎಂದು ಸಿಎಂ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸದ್ಯ ಕಾಂಗ್ರೆಸ್‌ಗೆ ಮಸ್ಕಿಯಲ್ಲಿ ಅಭ್ಯರ್ಥಿಯಿಲ್ಲ. ಒಂದುವೇಳೆ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಉಪಚುನಾವಣೆಯನ್ನು ಹೇಗೆ ಗೆಲ್ಲಬೇಕೆಂಬ ತಂತ್ರವನ್ನು ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದರು.
ಸಂಪುಟ ವಿಸ್ತರಣೆ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಚರ್ಚೆ ಮಾಡಿದ್ದು, ವರಿಷ್ಠರು ಯಾವಾಗ ನಿರ್ಧಾರ ಮಾಡುತ್ತಾರೋ ನೋಡಬೇಕು. ವರಿಷ್ಠರ ನಿರ್ಧಾರ ಹೊರಬಿದ್ದಾಗ ಮುಖ್ಯಮಂತ್ರಿಗಳು ವಿಸ್ತರಣೆ ಮಾಡುತ್ತಾರೆ ಎಂದರು.
ರಾಜ್ಯದ ಮರಾಠಿಗರ ಅಭಿವೃದ್ಧಿಗೆ ನಿಗಮ ಮಾಡಲಾಗಿದೆ. ಇದನ್ನು ಭಾಷೆ ಜೊತೆ ಜೋಡಿಸುವುದು ಎಷ್ಟು ಸರಿ?
ಮರಾಠಿಗರೂ ಸಹ ರಾಜ್ಯದಲ್ಲಿ ಹುಟ್ಟಿ ವಾಸವಿರುವವಾರಿದ್ದಾರೆ. ಎಲ್ಲವನ್ನೂ ವಿವಾದಕ್ಕೆ ಸಂಪರ್ಕ ಕಲ್ಪಿಸುವುದು ಸರಿಯಲ್ಲ. ಯಡಿಯೂರಪ್ಪ ಅವರು ತಿರುವಳ್ಳುವರ್ ಮತ್ತು ಸರ್ವಜ್ಞರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ದಶಕಗಳ ವಿವಾದನ್ನು ಸೌಹಾರ್ದಯುತವಾಗಿ ಬಗೆಹರಿಸಿದರು. ಈಗ ಕೆಲವರಿಗೆ ಕೆಲವು ತಪ್ಪು ಕಲ್ಪನೆ ಮೂಡಿದೆ, ಅದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ವಿಜಯೇಂದ್ರ ಉತ್ತರಿಸಿದರು.