ರಾಜ್ಯಕ್ಕೆ ಮೊದಲ ಹಂತದಲ್ಲಿ 6.47 ಲಕ್ಷ ವೈಲ್ ಗಳು: ಸುಧಾಕರ್
ಸರ್ಕಾರ ನೀಡುತ್ತಿರುವ ಲಸಿಕೆ ಸುರಕ್ಷಿತ
ಬೆಂಗಳೂರು:
ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 6.47 ಲಕ್ಷ ವೈಲ್ ಗಳು ಬರಲಿವೆ. ಇದನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಗಿ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗಲಿದೆ ಎಂದರು.
Sarve Santu Nirayama
— Dr Sudhakar K (@mla_sudhakar) January 12, 2021
The first consignment of 7.95 lakh vials of Vaccine has been dispatched from Serum Institute, Pune & will arrive in Bengaluru today at around 11:30 AM.
ಸರ್ವೇ ಸಂತು ನಿರಾಮಯಾ
ಪುಣೆಯಿಂದ ಹೊರಟಿರುವ ಮೊದಲ ಕಂತಿನ 7.95 ಲಕ್ಷ ಲಸಿಕೆ ಸಂಗ್ರಹ ಇಂದು 11:30ಕ್ಕೆ ಬೆಂಗಳೂರು ತಲುಪಲಿದೆ. pic.twitter.com/TarWqiy8gw
ಪ್ರತಿ ಡೋಸ್ ನಲ್ಲಿ 0.5 ಎಂಎಲ್ ಪ್ರಮಾಣವಿರುತ್ತದೆ. ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದರು.
ಇದು ಮಾರಾಟಕ್ಕಲ್ಲ ಎಂದು ಲಸಿಕೆಯ ವೈಲ್ ನಲ್ಲಿ ಬರೆಯಲಾಗಿದೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೊನಾ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದರು.