Home ಆರೋಗ್ಯ Covid-19: ಸರಿಯಾಗಿ ಕಾರ್ಯನಿರ್ವಹಿಸದ ಆರೋಗ್ಯ ವೈದ್ಯಾಧಿಕಾರಿಗಳು ಅಮಾನತು: ಮಂಜುನಾಥ್ ಪ್ರಸಾದ್

Covid-19: ಸರಿಯಾಗಿ ಕಾರ್ಯನಿರ್ವಹಿಸದ ಆರೋಗ್ಯ ವೈದ್ಯಾಧಿಕಾರಿಗಳು ಅಮಾನತು: ಮಂಜುನಾಥ್ ಪ್ರಸಾದ್

45
0
ಬೆಂಗಳೂರು:

ನಗರದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ 2,000 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ತ್ವರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ಯೋಜನೆಗಳನ್ನು ರೂಪಿಸಿಕೊಂಡು ಮೂಲದಲ್ಲಿಯೇ ಕೋವಿಡ್ ಉಲ್ಬಣಗೊಳ್ಳುವುದನ್ನು ನಿಯಂತ್ರಿಸಬೇಕು ಎಂದು ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ರವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ, ವಲಯ ಮಟ್ಟದಲ್ಲಿ ಕಾರ್ಯರ್ನಿಹಿಸುವ ಆರೋಗ್ಯ ವೈದ್ಯಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಇರುವ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸ್ವಾಬ್ ಸಂಗ್ರಹಿಸುವ, ಕೋವಿಡ್ ಪ್ರಕರಣಗಳು ಕಂಡುಬರುವ ಬಗ್ಗೆ ಜವಾಬ್ದಾರಿಯಿಂದ ಕೆಲಸ ಮಾಡಿ ಕೋವಿಡ್ ಪ್ರಕರಣಗಳು ಹರಡುವುದನ್ನು ಕಡಿಮೆ ಮಾಡಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಸರಿಯಾಗಿ ಕೆಲಸ ಮಾಡದ ಆರೋಗ್ಯ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಸೂಚನೆ ನೀಡಿದರು.

ಸಮರ್ಪಕ ವಿಳಾಸ ಪಡೆಯಿರಿ:

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಫೀವರ್ ಕ್ಲೀನಿಕ್, ಮೊಬೈಲ್ ಟೆಸ್ಟಿಂಗ್ ಕೇಂದ್ರ ಹಾಗೂ ಇನ್ನಿತರೆ ಆಸ್ಪೆತ್ರೆಗಳಲ್ಲಿ ಸ್ವಾಬ್ ಸಂಗ್ರಹಿಸುವ ವೇಳೆ ಸರಿಯಾದ ಮಾಹಿತಿ ಪಡೆಯುತ್ತಿಲ್ಲ. ಸ್ವಾಬ್ ಸಂಗ್ರಹಿಸುವ ವೇಳೆ ಕಡ್ಡಾಯವಾಗಿ ನಿಖರವಾದ ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಪಿನ್ ಕೋಡ್ ಸಂಗ್ರಹ ಮಾಡಿಕೊಳ್ಳಬೇಕು. ಸರಿಯಾದ ಮಾಹಿತಿ ಪಡೆಯದಿದ್ದರೆ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಪತ್ತೆಹಚ್ಚುವುದು ಕಷ್ಟವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಗಳು ಸರಿಯಾಗಿ ಕೆಲಸ ಮಾಡುವಂತೆ ಆಯುಕ್ತರು ಸೂಚನೆ ನೀಡಿದರು.

ಕೋವಿಡ್ ಪರೀಕ್ಷೆ ಸರಿಯಾಗಿ ಮಾಡಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯನ್ನು ಕಾಟಾಚಾರಕ್ಕೆ ಮಾಡಬೇಡಿ. ರೋಗಲಕ್ಷಣಗಳಿರುವ, ಐಎಲ್‌ಐ, ಸಾರಿ ಇರುವ, ಪ್ರಾಥಮಿಕ/ದ್ವಿತೀಯ ಸಂಪರ್ಕಿತರು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು, ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಿ. ರೋಗಲಕ್ಷಣಗಳಿಲ್ಲದವರಿಗೆಲ್ಲಾ ಪರೀಕ್ಷೆ ಮಾಡಿ ಕಿಟ್‌ಗಳನ್ನು ವ್ಯರ್ಥ ಮಾಡಬೇಡಿ ಎಂದು ಆಯುಕ್ತರು ಸೂಚನೆ ನೀಡಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನದಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿ ನೆಗೆಟಿವ್ ಬಂದವರಿಗೆ ಮಾತ್ರ ವಿಮಾನದಲ್ಲಿ ತೆರಳಲು ಅನುಮತಿ ನೀಡಲಿದೆ. ನೆಗೆಟಿವ್ ವರದಿ ಪಡೆದು ನಗರಕ್ಕೆ ಬಂದಿರುವವರ ಪಟ್ಟಿ ಪಡೆದು 7ನೇ ದಿನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಅದೇ ರೀತಿ ಹೊರರಾಜ್ಯಗಳಿಂದ ಬರುವವರಿಗೂ ಮಾಡಬೇಕು. ಜೊತೆಗೆ ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್‌ಗಳು, ಮಾರುಕಟ್ಟೆ, ಮದುವೆ ಮಂಟಪ, ಚಿತ್ರಮಂದಿರ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿ. ಜೊತೆಗೆ ಎಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ ಎಂಬುದನ್ನು ಅವಲೋಕಿಸಿ ಆ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲು ಸೂಚನೆ ನೀಡಿದರು.

ಔಷಧಿ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಿ:

ಪಾಲಿಕೆ ವ್ಯಾಪ್ತಿಯ ಆಯಾ ವಾರ್ಡ್ ಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮಟ್ಟದಲ್ಲಿ ಬರುವ ಎಲ್ಲಾ ಔಷಧ ಮಳಿಗೆಗಳಲ್ಲಿ ಕೋವಿಡ್ ಸೋಂಕು ಲಕ್ಷಣಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡು ಹೋಗಿರುವವರ ವಿವರವನ್ನು ನೀಡಲು ಸೂಚನೆ ನೀಡಬೇಕು. ಔಷಧಿ ಮಳಿಗೆಗಳಿಂದ ಪಡೆದ ಮಾಹಿತಿಯನ್ನು ಪ್ರತಿನಿತ್ಯ ಸಂಜೆ ಸಂಗ್ರಹಿಸಿಕೊಂಡು ಅಂತಹವರಿಗೆ ಕೋವಿಡ್ ಪರೀಕ್ಷೆ ಮಾಡಿ ಎಂದು ಆಯುಕ್ತರು ಸೂಚನೆ ನೀಡಿದರು.

ಲ್ಯಾಬ್‌ಗಳಿಗೆ ದಿನಕ್ಕೆರಡು ಬಾರಿ ಸ್ಯಾಂಪಲ್ ಕೊಡಿ:

ನಗದರಲ್ಲಿ ಐಎಲ್‌ಐ ಹಾಗೂ ಸಾರಿ ಲಕ್ಷಣಗಳಿರುವವರಿಂದ ಸಂಗ್ರಹ ಮಾಡಿದ ಸ್ವಾಬ್‌ನ ಸ್ಯಾಂಪಲ್‌ಗಳನ್ನು ದಿನಕ್ಕೆರಡು ಬಾರಿ ಲ್ಯಾಬ್‌ಗಳಿಗೆ ಕಳುಹಿಸಿಕೊಡಿ. ಈ ಸಂಬಂಧ ವಿಶೇಷ ಆಯುಕ್ತರು(ಆರೋಗ್ಯ) ರವರಿಗೆ ಲ್ಯಾಬ್‌ಗಳ ಜೊತೆ ಮಾತನಾಡಲು ಆಯುಕ್ತರು ಸೂಚನೆ ನೀಡಿದರು.

ಕಾಂಟ್ಯಾಕ್ಟ್ ಟ್ರೇಸಿಂಗ್ ಸರಿಯಾಗಿ ಮಾಡಿ:

ಪಾಲಿಕೆ ವ್ಯಾಪ್ತಿಯಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಮಾಡಬೇಕು. ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ಧೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೆ, ಭೂತ್ ಮಟ್ಟದ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಸಂಬಂಧಪಟ್ಟ ಸಹಾಯ ಕಂದಾಯ ಅಧಿಕಾರಿಗಳಿಗೆ ನೀಡಬೇಕು. ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆಲ್ಲಾ ತ್ವರಿತವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.

ಕೋವಿಡ್ ನಿಯಮಗಳ ಪಾಲನೆ:

ನಗರದ ಆಯಾ ವಲಯಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ವಲಯ ಜಂಟಿ ಆಯಕ್ತರುಗಳು ಸೂಕ್ತ ಕ್ರಮವಹಿಸಬೇಕು. ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಿಗೆ ಮಾರ್ಷಲ್‌ಗಳನ್ನು ಕಳುಹಿಸಿ ದಂಡ ವಿಧಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಹೋಮ್ ಐಸೋಲೇಶನ್:

ಕೋವಿಡ್ ಸೋಂಕು ಧೃಡಪಟ್ಟ ಶೇ. 85 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಈ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾವಹಿಸಿ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿರಬೇಕು. ಪ್ರಮುಖವಾಗಿ 60 ವರ್ಷ ಮೇಲ್ಪಟ್ಟವರು ಹೋಮ್ ಐಸೋಲೇಷನ್ ನಲ್ಲಿದ್ದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಏನಾದರು ಸಮಸ್ಯೆ ಕಂಡುಬಂದರೆ ಕೂಡಲೆ ಆಸ್ಪತ್ರೆಗೆ ಕರೆದೊಯ್ದು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

ಪಿ.ಹೆಚ್.ಎ.ಎಸ್.ಟಿ (PHAST) ಪೋರ್ಟಲ್:

ಪ್ರಾಥಮಿಕ ಆರೋಗ್ಯ ಕೆಂದ್ರಗಳ ಮಟ್ಟದಲ್ಲಿ ಕಣ್ಗಾವಲು ಚಟುವಟಿಕೆ, ಕೋವಿಡ್ ಪಾಸಿಟಿವ್ ಮಾಹಿತಿ, ಐಎಲ್‌ಐ-ಸಾರಿಯಿರುವವರ ಲೈನ್ ಲಿಸ್ಟ್ ಪಡೆದು ಸ್ವಾಬ್ ಸಂಗ್ರಹ ಮಾಡುವುದು, ಪ್ರಾಥಮಿಕ/ದ್ವಿತೀಯ ಸಂಪರ್ಕಿತರ ಲೈನ್‌ಲಿಸ್ಟ್ ಪಡೆದು ಪರೀಕ್ಷೆಗೊಳಪಡಿಸುವುದು, ಕೋವಿಡ್ ಧೃಢಪಟ್ಟ ಪ್ರದೇಶವನ್ನು ಸರ್ವೇ ಮಾಡುವ ಕಾರ್ಯ, ಅಂತಾರಾಷ್ಟ್ರೀಯ ಹಾಗೂ ಹೊರ ರಾಜ್ಯದಿಂದ ಬಂದವರಿಗೆ 7ನೇ ದಿನ ಪರೀಕ್ಷೆ ಮಾಡುವುದು ಸೇರಿದಂತೆ ಪಿ.ಹೆಚ್.ಎ.ಎಸ್.ಟಿ ಪೋರ್ಟಲ್ ನಲ್ಲಿ ಎಲ್ಲಾ ಮಾಹಿತಿ ಲಭ್ಯವಿರಲಿದ್ದು, ಸದರಿ ಪೋರ್ಟಲ್ ಮೂಲಕ ಎಲ್ಲವನ್ನೂ ತ್ವರಿತವಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು.

ಲಸಿಕೆ ಹೆಚ್ಚಳಕ್ಕೆ ಕ್ರಮ:

45 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡಬೇಕು. ಲಸಿಕೆಗೆ ಯಾವುದೇ ಕೊರತೆಯಿಲ್ಲ. ಆದ್ದರಿಂದ ಏಪ್ರಿಲ್ 1 ರಿಂದ ಹೆಚ್ಚು ಲಸಿಕೆ ನೀಡಲು ಕ್ರಮವಹಿಸಬೇಕು. ಜೊತೆಗೆ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವ ಕಡೆ ಹೆಚ್ಚು ಲಸಿಕೆ ನೀಡಲು ಮುಂದಾಗಬೇಕು. ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿರುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಲಸಿಕೆ ತೆಗೆದುಕೊಳ್ಳಲು ನಾಗರಿಕರಿಲ್ಲಿ ಅರಿವು ಮೂಡಿಸಿ. ಈ ಪೈಕಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಅಥವಾ 2 ಆಟೋಗಳನ್ನು ಪಡೆದು ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸಿ. ಸ್ಲಂಗಳಲ್ಲಿ ಲಸಿಕೆ ಪಡೆಯುವವರಿಗೆ ವಾಹನಗಳನ್ನು ಕಳುಹಿಸಿ ಅವರಲ್ಲಿ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಿ. ಈ ಮೂಲಕ ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ಎಲ್ಲಾ ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here