ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಕೋಟಾದಡಿ ಬೆಡ್ ವಿತರಣೆ ಮಾಡುವ ವ್ಯವಸ್ಥೆ ಸುಧಾರಣೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಅವರು ಇಂದು ಬಿಬಿಎಂಪಿ ಕರೋನ ವಾರ್ ರೂಂ ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಿಗೆ ನೇಮಕ ಮಾಡಲಾಗಿರುವ ನೋಡಲ್ ಆಫೀಸರ್ ಗಳು ಇನ್ನು ಮುಂದೆ ಪ್ರತಿದಿನ ಆಸ್ಪತ್ರೆಗೆ ದಾಖಲಾದ ರೋಗಿಗಳ ವಿವರ, ದಾಖಲಾಗಿರುವ ರೋಗಿಗಳ ವಿವರ ಮತ್ತು ಮೃತಪಟ್ಟ ರೋಗಿಗಳ ವಿವರಗಳನ್ನು ಒದಗಿಸಬೇಕು, ಬಿಬಿಎಂಪಿಯ ಮೇಲಾಧಿಕಾರಿಗಳು ಇದನ್ನು ಪರಿಶೀಲಿಸಿ ವಾರ್ ರೂಮ್ ನಲ್ಲಿರುವ ಅಂಕಿ ಅಂಶಗಳ ಜೊತೆ ಹೊಂದಾಣಿಕೆ ಮಾಡಿ ದೈನಂದಿನ ವಿವರಗಳನ್ನು ತಪ್ಪದೆ ಪ್ರಕಟಿಸಬೇಕು ಎಂದು ಸಚಿವರು ಸೂಚಿಸಿದರು.
ಕರೋನಾ ಪಾಸಿಟಿವ್ ಬಂದವರು ಇನ್ನುಮುಂದೆ ಸ್ಟಬಿಲೈಸೇಶನ್ ಸೆಂಟರ್ ಗೆ ಬರಬೇಕು ಅಲ್ಲಿ ಅವರನ್ನು ತಪಾಸಣೆ ಮಾಡಿ ಯಾವ ರೀತಿಯ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆಯೋ ಅಂತಹ ಆಸ್ಪತ್ರೆಗಳಿಗೆ ಅವರನ್ನು ಕಳುಹಿಸಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಡ್ ಗಳಿಗಿರುವ ಬೇಡಿಕೆಯನ್ನು ಅನುಸರಿಸಿ step-down ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇನ್ನು ಮುಂದೆ ಸ್ವಾಬ್ ಟೆಸ್ಟ್ ಮಾಡುವಾಗಲೇ ಸೋಂಕಿತರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್, ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದರು.