Home ಆರೋಗ್ಯ Covid-19: ಬಿಬಿಎಂಪಿಗೆ ಪ್ರತಿದಿನ 1 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿ

Covid-19: ಬಿಬಿಎಂಪಿಗೆ ಪ್ರತಿದಿನ 1 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿ

66
0

ಬೆಂಗಳೂರು:

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸಲು ಪ್ರತಿ ದಿನ 1 ಲಕ್ಷ ಪರೀಕ್ಷೆ ಮಾಡಲು ಹಾಗೂ ಒಂದು ಪ್ರಕರಣಕ್ಕೆ 20 ಸಂಪರ್ಕಿತರ ಪತ್ತೆಗೆ ಸೂಚಿಸಲಾಗಿದೆ. ಜೊತೆಗೆ ಮನೆಮನೆ ಭೇಟಿ ವ್ಯವಸ್ಥೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕೋವಿಡ್ ನಿಯಂತ್ರಣ ಸಂಬಂಧ ಚರ್ಚಿಸಿದರು.

ನಂತರ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವುದರಿಂದ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಅಧಿಕಾರಿಗಳು ಜನರ ಮನೆಗೆ ಬಂದು ಕೊರೊನಾ ಪರೀಕ್ಷೆ ಮಾಡಿದರೆ ಸಹಕರಿಸಬೇಕು. ಯಾರೂ ಗಲಾಟೆ ಮಾಡಬಾರದು ಎಂದರು.

ಮನೆಮನೆ ಸರ್ವೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 8,500 ಬೂತ್ ಇದ್ದು, ಪ್ರತಿ ಕಡೆ ತಂಡ ರಚಿಸಲಾಗುವುದು. ಈ ತಂಡ ಪ್ರತಿ ಮನೆಗೆ ಹೋಗಿ ಪರೀಕ್ಷೆ ಮಾಡಲಿದೆ. ಕೊರೊನಾ ರೋಗಿಗಳಿಗೆ ಸಹಾಯ, ಐಸೋಲೇಟ್ ಆದವರ ಸಂಚಾರ, ಅವರಿಗೆ ಆರೋಗ್ಯ ರಕ್ಷಣೆ, ಮುದ್ರೆ ಹಾಕುವುದು, ಆರೋಗ್ಯ ಪರೀಕ್ಷೆ, ಸೋಂಕಿಗೊಳಗಾದವರಿಗೆ ಆಕ್ಸಿಜನ್ ವ್ಯವಸ್ಥೆ ಹೇಗಿದೆ ಎಂಬ ಮೊದಲಾದ ಕೆಲಸಗಳನ್ನು ಈ ತಂಡ ಮಾಡಲಿದೆ. ಕಳೆದ ವರ್ಷವೇ ಈ ಕಾರ್ಯಕ್ರಮ ಹಾಕಿಕೊಂಡಿದ್ದರೂ ನೂರಕ್ಕೆ ನೂರು ಆಗಿರಲಿಲ್ಲ. ಇದನ್ನು ಪ್ರಾಶಸ್ತ್ಯದಲ್ಲಿ ಮಾಡಲಾಗುತ್ತದೆ. ಪ್ರತಿ ವಾರ್ಡ್ ಗೆ ಒಂದರಂತೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದು, ಒಟ್ಟು 250 ಸಿದ್ಧವಿದೆ ಎಂದರು.

Sudhakar covid meeting

ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು, ನೇರವಾಗಿ ಹೋಗುವ ಬಗ್ಗೆ ಸ್ಪಷ್ಟಪಡಿಸಲಾಗುವುದು. 2 ಸಾವಿರ ಹೋಮ್ ಗಾರ್ಡ್ ಬೇಕೆಂದು ಆಯುಕ್ತರು ಗೃಹ ಇಲಾಖೆಗೆ ಕೇಳಿದ್ದು, ನಾನು ಕೂಡ ಮುಖ್ಯಮಂತ್ರಿಗಳಿಗೆ ಕೋರುತ್ತೇನೆ. ಇವರು ಕೋವಿಡ್ ನಡವಳಿಕೆ ಮೇಲೆ ನಿಗಾ ಇಡಲಿದ್ದಾರೆ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

  • ಬೆಂಗಳೂರಿನಲ್ಲಿ 1 ಸಾವಿರ ಹಾಸಿಗೆ ಕೋವಿಡ್ ಗೆ ಲಭ್ಯವಿದೆ. 3-4 ಸಾವಿರ ಹಾಸಿಗೆ ಬೇಕೆಂದು ಆಯುಕ್ತರು ಕೇಳಿದ್ದಾರೆ.
  • ಬೆಂಗಳೂರಿನಲ್ಲಿ ಹಾಸಿಗೆ ಲಭ್ಯತೆ ಕುರಿತು ವೆಬ್ ಸೈಟ್ ನಲ್ಲೇ ಮಾಹಿತಿ ಹಾಕಲಾಗುವುದು. ಇದರಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ.
  • ಮುಖ್ಯಮಂತ್ರಿಗಳು ಇಂದು ಸಂಜೆ ಪ್ರಧಾನಿಯವರ ಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ. ಹಾಗೆಯೇ ಸಲಹೆಗಳನ್ನು ಕೂಡ ನೀಡಲಿದ್ದಾರೆ.
  • ರಾಜ್ಯದಲ್ಲಿ ಈಗಾಗಲೇ 25-30 ಲಕ್ಷ ಕೋವಿಡ್ ಡೋಸ್ ಸಂಗ್ರಹವಿದೆ. ಇನ್ನೂ 25 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಲಸಿಕೆ ಕೊರತೆ ಇಲ್ಲ.
  • ಆರೋಗ್ಯ ಸಿಬ್ಬಂದಿ ವಸತಿ ಸಮುಚ್ಛಯಕ್ಕೆ ಹೋಗಿ ಲಸಿಕೆ ನೀಡಲಿದ್ದಾರೆ. ಇದಕ್ಕೆ ತಂಡ ರಚಿಸಲಾಗುವುದು.
  • ರಾಜಕೀಯ ಸಭೆ, ಸಮಾರಂಭಗಳನ್ನು ಕೂಡ ಮಾರ್ಗಸೂಚಿ ಅನ್ವಯ ಮಾಡಬೇಕಿದೆ. ಇಲ್ಲದಿದ್ದಲ್ಲಿ ನಾವೆಲ್ಲರೂ ನೈತಿಕ ಹೊಣೆ ಹೊರಬೇಕಾಗುತ್ತದೆ. ಈ ಕುರಿತು ಚುನಾವಣಾ ಆಯುಕ್ತರಿಗೆ ಕೋರಲಾಗಿದೆ.

LEAVE A REPLY

Please enter your comment!
Please enter your name here