Home ಬೆಂಗಳೂರು ನಗರ Covid-19: ಆರೋಗ್ಯ ಮೂಲಸೌಕರ್ಯ ಬಲವರ್ಧನೆ ಮುಂದುವರಿಸಿದ ಕರ್ನಾಟಕ

Covid-19: ಆರೋಗ್ಯ ಮೂಲಸೌಕರ್ಯ ಬಲವರ್ಧನೆ ಮುಂದುವರಿಸಿದ ಕರ್ನಾಟಕ

102
0

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರನ್ನು ಭೇಟಿ ಮಾಡಿದ ಕಾರ್ಪೊರೇಟ್ ಪ್ರತಿನಿಧಿಗಳು; ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಸಿಎಸ್ ಆರ್ ಅನುದಾನ ನೀಡಲು ಬದ್ಧ

ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 40 ಐಸಿಯು ಹಾಸಿಗೆ ಹಾಗೂ 500 ಎಲ್‍ಪಿಎಂ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ

ಸಿಎಸ್‍ಆರ್ ಚಟುವಟಿಕೆಯಡಿ 50 ಆಕ್ಸಿಜನ್ ಸಾಂದ್ರಕಗಳು ಹಾಗೂ 50 ನಾನ್ ಇನ್ವೇಸಿವ್ ಬಿಐಪಿಎಪಿ ವೆಂಟಿಲೇಟರ್ ಗಳ ಅಳವಡಿಕೆ

ಬೆಂಗಳೂರು:

ವಿವಿಧ ಕಾರ್ಪೊರೇಟ್ ಕಂಪನಿಗಳ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೋವಿಡ್-19 ನಿಯಂತ್ರಣದ ಭಾಗವಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 40 ಐಸಿಯು ಹಾಸಿಗೆ ಅಳವಡಿಸುವ ಕುರಿತು ತಿಳಿಸಿದರು. ಇದರೊಂದಿಗೆ, ಸಿಎಸ್ ಆರ್ ಕಾರ್ಯಕ್ರಮದಡಿ ಆಸ್ಪತ್ರೆಯಲ್ಲಿ 500 ಎಲ್‍ಪಿಎಂ ಆಕ್ಸಿಜನ್ ಘಟಕವೂ ಸ್ಥಾಪನೆಯಾಗಲಿದೆ.

ಜೊತೆಗೆ, ಯುಎನ್‍ಡಿಪಿ ತಾಂತ್ರಿಕ ನೆರವಿನಲ್ಲಿ ಯೂಯಿಲ್ ಇನ್‍ಫ್ರಾಸ್ಟ್ರಕ್ಚರ್ 50 ಆಕ್ಸಿಜನ್ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದೆ. 50 ನಾನ್ ಇನ್ವೇಸಿವ್ ಬಿಐಪಿಎಪಿ ವೆಂಟಿಲೇಟರ್ ಗಳನ್ನು ಭಾರತ ಅಮೆರಿಕದ ದಾನಿಗಳು ನೀಡಿದ್ದು, ಅವುಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ಎಂಬಸ್ಸಿ ಗ್ರೂಪ್, 3ಎಂ, ಸ್ವಿಸ್ ರೇ, ಕ್ಯಾಪಿಟಾಲ್ಯಾಂಡ್ ಹೋಪ್ ಫೌಂಡೇಶನ್, ಆಕ್ಸಾ, ಐಸಿಮ ಹಾಗೂ ಸಿಐಐ ದೇಣಿಗೆ ನೀಡಿದ ಕಂಪನಿಗಳಾಗಿದ್ದು, ಆಕ್ಸಿಜನ್ ಘಟಕವನ್ನು ಸಂಭವ್ ಫೌಂಡೇಶನ್ ಸಹಯೋಗದಲ್ಲಿ ಲೋವ್ಸ್ ನೀಡಿದೆ.

ಕಂಪನಿಗಳ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹಾಗೂ ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ಉಪಸ್ಥಿತರಿದ್ದರು.

Covid 19 Karnataka Continues strengthening Health Infrastructure in state IPS Harsha2

ಕಂಪನಿಗಳ ಪ್ರಯತ್ನವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, “ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ. ಬೆಂಗಳೂರು ನಗರದಲ್ಲಿರುವವರ ಸ್ವಯಂಸೇವಾ ಮನೋಭಾವ ಹಾಗೂ ನಾಗರಿಕ ಸಹಭಾಗಿತ್ವವನ್ನು ಇದು ಪ್ರತಿಬಿಂಬಿಸಿದೆ” ಎಂದರು.

ಸಿಐಐ ಕರ್ನಾಟಕ ವೃತ್ತದ ಅಧ್ಯಕ್ಷ ರಮೇಶ್ ರಾಮದೊರೈ, ಆರೋಗ್ಯ ಇಲಾಖೆ ಮತ್ತು ಪೂರ್ಣ ಬೆಂಬಲ ನೀಡಿದ ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ಅವರಿಗೆ ಕೃತಜ್ಞತೆ ಸಲ್ಲಿಸಿದರು. ದೀರ್ಘಕಾಲದವರೆಗೂ ಮೂಲಸೌಕರ್ಯ ಬಲವರ್ಧನೆ ಹಾಗೂ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಕೈಲಾದ ಬೆಂಬಲ, ನೆರವು ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ತುರ್ತು ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಸಿಎಸ್‍ಆರ್ ಕಡೆ ಗಮನಹರಿಸಿದ ಕರ್ನಾಟಕ ಸರ್ಕಾರ

ಕೋವಿಡ್ ಎರಡನೇ ಅಲೆಯ ತೀವ್ರತೆ ತಗ್ಗಿದ್ದರೂ ರಾಜ್ಯ ಸರ್ಕಾರವು ಮೂರನೇ ಅಲೆಯನ್ನು ಗಮನದಲ್ಲಿರಿಸಿಕೊಂಡು ಆರೋಗ್ಯ ಮೂಲಸೌಕರ್ಯ ಹೆಚ್ಚಿಸುತ್ತಿದೆ. ಆರೋಗ್ಯ ಮೂಲಸೌಕರ್ಯ ಹೆಚ್ಚಳ ಕ್ರಮಗಳು ಇವುಗಳನ್ನು ಒಳಗೊಂಡಿದೆ :

• ಕೊರೊನಾ ರೋಗಿಗಳ ಚಿಕಿತ್ಸೆಗೆ ಸುಮಾರು 780 ಹಾಸಿಗೆಗಳನ್ನು ಅಳವಡಿಸಲು ಸಿದ್ಧತೆ ನಡೆದಿದ್ದು, 104 ಹಾಸಿಗೆಗಳನ್ನು ಈಗಾಗಲೇ ಅಳವಡಿಸಿ ಬಳಸಲಾಗುತ್ತಿದೆ. ಜಯನಗರ ಜನರಲ್ ಆಸ್ಪತ್ರೆಯಲ್ಲಿ ಎಂಬಸ್ಸಿ ಗ್ರೂಪ್ ಹಾಗೂ ಎಜೆಡ್‍ಯು 24 ಹಾಸಿಗೆಗಳನ್ನು ಅಳವಡಿಸಿದೆ.
• 3ಎಂ, ಹಿಟಾಚಿ, ಎಬಿಬಿ ಪವರ್ ಗ್ರಿಡ್ಸ್, ವೋಲ್ವೋ ಸಮೂಹದಿಂದ ಸಿವಿ ರಾಮನ್ ಜನರಲ್ ಆಸ್ಪತ್ರೆಗೆ 56 ಹಾಸಿಗೆಗಳು ದೊರೆತಿವೆ.
• ಎಂಬಸ್ಸಿ ಗ್ರೂಪ್, ಮೆಕ್‍ಕ್ಯಾಫೆ, ಆಕ್ಸಾ, ಯಾಹೂ, ಕ್ಯಾಪಿಟಲ್ ಲ್ಯಾಂಡ್ ಸ್ವಿಸ್ ರೇ ಸಹಯೋಗದಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24 ಹಾಸಿಗೆಗಳು ಅಳವಡಿಕೆಯಾಗಿವೆ. ಆರ್‍ಜಿಐಸಿಡಿಯಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ನಿಂದ 190 ಹಾಸಿಗೆ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.
Covid 19 Karnataka Continues strengthening Health Infrastructure in state IPS Harsha1

ನೋಡಲ್ ಅಧಿಕಾರಿ, ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಕಚೇರಿಯ ಉಪಕ್ರಮ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು 2021, ಏಪ್ರಿಲ್ 30 ರಂದು, ಬಿಬಿಎಂಪಿಯ 8 ವಲಯಗಳಲ್ಲಿ 500 ಐಸಿಯು ಹಾಸಿಗೆ ಸ್ಥಾಪನೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಉಪಕ್ರಮಗಳು ನೋಡಲ್ ಅಧಿಕಾರಿಗಳ ಕಾರ್ಯವಾಗಿದೆ.

ಸಿಎಸ್‍ಆರ್ ಚಟುವಟಿಕೆಯನ್ನು ಶ್ಲಾಘಿಸಿದ ಡಾ.ಪಿ.ಎಸ್.ಹರ್ಷ, “ಸಿಲಿಕಾನ್ ವ್ಯಾಲಿ ಹಾಗೂ ಭಾರತದ ಜ್ಞಾನಕೇಂದ್ರವಾಗಿರುವ ಬೆಂಗಳೂರು, ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದ ಬಹುರಾಷ್ಟ್ರೀಯ ಕಂಪನಿಗಳಿಗೆ ನೆಲೆಯಾಗಿದೆ. ಸಮಾಜಕ್ಕೆ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲಿ ಅನೇಕ ಕಂಪನಿಗಳು ಮುಂದೆ ಬಂದು ಸಹಾಯಹಸ್ತ ಚಾಚುತ್ತಿರುವುದು ಹೃದಯಸ್ಪರ್ಶಿಯಾಗಿದೆ” ಎಂದು ತಿಳಿಸಿದ್ದಾರೆ.

“ಎಂಬಸ್ಸಿ ಗ್ರೂಪ್, 3 ಎಂ, ಸ್ವಿಸ್ ರೇ, ಕ್ಯಾಪಿಟಾಲ್ಯಾಂಡ್ ಹೋಪ್ ಫೌಂಡೇಶನ್, ಆಕ್ಸಾ, ಐಸಿಮ ಮತ್ತು ಸಿಐಐ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 40 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ. ಲೋವ್ಸ್ ಹಾಗೂ ಸಂಭವ್ ಫೌಂಡೇಶನ್ 500 ಎಲ್‍ಪಿಎಂ ಆಕ್ಸಿಜನ್ ಘಟಕವೂ ಸ್ಥಾಪನೆಗೆ ಮುಂದಾಗಿರುವುದಕ್ಕೂ ಧನ್ಯವಾದ ಅರ್ಪಿಸುತ್ತೇನೆ. ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಎಲ್ಲಾ ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಲು ಮನವಿ ಮಾಡುತ್ತೇನೆ” ಎಂದು ಅವರು ಕೋರಿದ್ದಾರೆ.

ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಲು ಬಯಸುವ ಕಾರ್ಪೊರೇಟ್ ಗಳು nodalicubbmp@gmail.com ಗೆ ಇಮೇಲ್ ಮಾಡಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here