ಬೆಂಗಳೂರು:
ವಾರಾಂತ್ಯದ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇದೇ ಶುಕ್ರವಾರ ನಡೆಯುವ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತಜ್ಞರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, “ರಾಜ್ಯದಲ್ಲಿ ಕೋವಿಡ್ ಕೇಸ್ ಗಳು ಗರಿಷ್ಠ ಮಟ್ಟಕ್ಕೆ ಸಾಗುತ್ತಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಜನವರಿ 25 ರ ಸುಮಾರಿಗೆ ಸೋಂಕು ಗರಿಷ್ಠ ಮಟ್ಟ ತಲುಪಬಹುದು. ಹೀಗಾಗಿ ಶುಕ್ರವಾರದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿಯವರೆಗೆ ಈಗಿನ ಮಾರ್ಗಸೂಚಿಯೇ ಮುಂದುವರಿಯಲಿದೆ.
ಪ್ರಕರಣಗಳು ಕಡಿಮೆ ಆದರೆ ಮಾತ್ರ ವಾರಂತ್ಯದ ನಿರ್ಭಂದ ಸಡಿಲಿಕೆ ಬಗ್ಗೆ ನಾವು ಚಿಂತಿಸುತ್ತೇವೆ. ಪ್ರಸ್ತುತ ಮುಂಬೈ ಮತ್ತು ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿವೆ. ಇಲ್ಲಿಯೂ ಸಹ ಅದೇ ರೀತಿ ಆಗಬಹುದು ಎಂದು ನಿರೀಕ್ಷಿಸುತ್ತೇವೆ. ಲಾಕ್‌ಡೌನ್ ಹೇರುವ ಯಾವುದೇ ಪ್ರಸ್ತಾಪವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಜನರ ರಕ್ಷಣೆಗೆ ಎಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ. ಪ್ರಾಣ ಹಾನಿ ಆಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ” ಎಂದು ಹೇಳಿದರು.