ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಕಾರ್ಯಪಡೆ ಸಭೆಯಲ್ಲಿ ಮಹತ್ವದ ನಿರ್ಧಾರ ಮೂರು ದಿನಗಳಲ್ಲಿ ನೂತನ ಆಮ್ಲಜನಕ ನೀತಿ
ಲಸಿಕೆಯ ಅಂತರ ನಿಗಧಿ, 30 ಲಕ್ಷ ಸೋಂಕಿತರಿಗೆ ಮೆಡಿಕಲ್ ಕಿಟ್ ಲಸಿಕೆ ಖರೀದಿಗೆ 843 ಕೋಟಿ ರೂ. ಅನುದಾನ; ರೆಮಿಡಿಸಿವಿರ್ ಖರೀದಿಗೆ 75 ಕೋಟಿ ಜಾಗತಿಕ ಟೆಂಡರ್ ಅಂತಿಮ
ಬೆಂಗಳೂರು:
ರಾಜ್ಯದ ಗ್ರಾಮೀಣ ಹಾಗೂ ನಗರ & ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡದಿರಲು ನಿರ್ಧರಿಸಿರುವ ಸರಕಾರ, ಅಂಥ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ 4 ಗಂಟೆ ಕಾಲ ನಡೆದ ಕಾರ್ಯಪಡೆಯ ಸುದೀರ್ಘ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅವರು ಈ ಕುರಿತು ಮಾಹಿತಿ ನೀಡಿದರು. ಹಳ್ಳಿಗಳಲ್ಲಿ ವಾಸ ಮಾಡುವ ಸೋಂಕಿರನ್ನು ಯಾವುದೇ ಕಾರಣಕ್ಕೂ ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡುವುದಿಲ್ಲ. ಪಾಸಿಟೀವ್ ಆಗಿದೆ ಎಂದು ವರದಿ ಬಂದ ತಕ್ಷಣವೇ ಹತ್ತಿರದ ಕೋವಿಡ್ ಕೇರ್ ಕೇಂದ್ರಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುವುದು. ಅದೇ ರೀತಿ ನಗರ- ಪಟ್ಟಣ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸ ಮಾಡುವ ಸೋಂಕಿತರಿಗೂ ಇದೇ ರೀತಿಯಲ್ಲಿ ಸ್ಥಳಾಂತರ ಮಾಡಿ ಉಚಿತ ಚಿಕಿತ್ಸೆ ಕೊಡಲಾಗುವುದು. ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ, ಔಷಧಿ ನೀಡಲು ಸುಲಭವಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳಿಗೆ ಹೊಣೆ
ಗ್ರಾಮೀಣ ಭಾಗ ಹಾಗೂ ನಗರದ ಕೊಳೆಗೇರಿಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ಮನೆ ಮನೆಯಲ್ಲೂ ರಾಟ್ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ʼನಲ್ಲಿಯೇ ಇರಬೇಕು. ಪ್ರತಿ ಪಿಎಚ್‌ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿನ ಹಾಸ್ಟೆಲ್ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಎಲ್ಲ ಜವಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲು ಕಾರ್ಯಪಡೆ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಲಸಿಕೆ ಅಂತರ ನಿರ್ಧಾರ
ವ್ಯಾಕ್ಸಿನ್ ಬಗ್ಗೆ ಉಂಟಾಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪಡೆ ಕೆಲ ಪರಿಹಾರಗಳನ್ನು ಕಂಡುಕೊಂಡಿದೆ. ಕೋವ್ಯಾಕ್ಸಿನ್ ಮಟ್ಟಿಗೆ ಹೇಳುವುದಾದರೆ ಇನ್ನು 2ನೇ ಡೊಸ್ ಅನ್ನು ಮಾತ್ರ ನೀಡಲಾಗುವುದು. ಮೊದಲ ಡೋಸ್ ಪಡೆದು 6 ವಾರ ಆಗಿರುವವರಷ್ಟೇ 2ನೇ ಡೋಸ್ ಲಸಿಕೆ ಪಡೆಯಲು ಅರ್ಹರು.
ಇನ್ನು ಕೋವಿಶೀಲ್ಡ್ ವಿಚಾರಕ್ಕೆ ಬಂದರೆ, 45+ ವಯೋಮಿತಿಯವರಿಗೆ ಮೊದಲನೇ ಡೋಸ್ ನೀಡಲು ಆದ್ಯತೆ ಕೊಡಲಾಗುತ್ತದೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ 2ನೇ ಡೋಸ್ ಪಡೆಯಲು ಅವಕಾಶ ಇರುತ್ತದೆ. ಅದಕ್ಕೂ ಮೊದಲು ಯಾರಿಗೂ ಎರಡನೇ ಡೋಸ್ ಕೊಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ ಡಿಸಿಎಂ ತಿಳಿಸಿದರು.
ಯಾರಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ಪಟ್ಟಿ ಸಿದ್ಧ ಮಾಡಲಾಗುವುದು. ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್ʼನೆಟ್ ಪ್ರೊವೈಡರ್ಸ್ ಸೇರಿ ಅತ್ಯಗತ್ಯ ವಲಯಗಳಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಲಸಿಕೆಯ ದಾಸ್ತಾನು ನೋಡಿಕೊಂಡು 18-44 ವಯೋಮಿತಿಯವರಿಗೆ ಯಾವ ದಿನಾಂಕದಿಂದ ಲಸಿಕೆ ಕೊಡಬೇಕು ಎಂಬುದನ್ನು ಕಾರ್ಯಪಡೆ ನಿರ್ಧರಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಆಪ್‌ಅನ್ನು ಕೋವಿನ್ ಪೋರ್ಟಲ್‌ಗೆ ಅನುಸಂಧಾನವಾದ ಮೇಲೆ ಈ ವಯೋಮಿತಿಯವರಿಗೆ ಲಸಿಕೆ ಕೊಡುವುದನ್ನು ಆರಂಭಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ಲಸಿಕೆ ಕೊಡುವುದನ್ನು ಆಸ್ಪತ್ರೆಯ ಬದಲಾಗಿ ಆಸ್ಪತ್ರೆಗಳಿಂದ ಹೊರಗೆ ನೀಡಲು ನಿರ್ಧರಿಸಲಾಗಿದೆ. ವಿಶಾಲವಾದ ಶಾಲಾ ಕಟ್ಟಡ, ಶಾಲಾ ಮೈದಾನ, ಕ್ರೀಡಾಂಗಣ ಇತ್ಯಾದಿ ಕಡೆಗಳಲ್ಲಿ ಲಸಿಕೆ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಲಸಿಕೆ: ಜಾಗತಿಕ ಟೆಂಡರ್ ಅಂತಿಮ
2 ಕೋಟಿ ಡೋಸ್ ಲಸಿಕೆ ಖರೀದಿ ಮಾಡುವ ಜಾಗತಿಕ ಟೆಂಡರ್ ಅನ್ನು ಇವತ್ತೇ ಫೈನಲ್ ಮಾಡಲಾಗಿದೆ. ತಲಾ 50 ಲಕ್ಷ ಡೋಸ್‌ನಂತೆ ನಾಲ್ಕು ಕಂಪನಿಗಳಿಂದ ಖರೀದಿ ಮಾಡಲಾಗುವುದು. ಒಂದೇ ಕಂಪನಿಗೆ 2 ಕೋಟಿ ಡೋಸ್ ಪೂರೈಕೆ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ 843 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ ಎಂದರು ಡಿಸಿಎಂ.
ಮುಖ್ಯವಾಗಿ ರೆಮಿಡಿಸ್ವೀರ್ʼನ 5 ಲಕ್ಷ ಡೋಸ್ ಇಂಜೆಕ್ಷನ್ ಖರೀದಿಗೂ ಜಾಗತಿಕ ಟೆಂಡರ್ ಕರೆಯಲು ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಇದಕ್ಕೆ 75 ಕೋಟಿ ರೂ. ಮೀಸಲು ಇಡಲು ಕಾರ್ಯಪಡೆ ಒಪ್ಪಿಗೆ ನೀಡಿದೆ.
ಇದಲ್ಲದೆ, ಮುಂದಿನ ಮೂರು ತಿಂಗಳಿಗೆ ಅಗತ್ಯವಾದ ಎಲ್ಲ ಔಷಧಿ, 30 ಲಕ್ಷ ಸೋಂಕಿತರಿಗೆ ಮೆಡಿಕಲ್ ಕಿಟ್ ಒದಗಿಸುವುದು, ಮುಂದಿನ 90 ದಿನಗಳಿಗೆ ಬೇಕಾಗಿರುವ 1 ಕೋಟಿ rtpcr ಕಿಟ್‌ಗಳ ಖರೀದಿ, ಹಾಗೆಯೇ 1 ಕೋಟಿ rat ಟೆಸ್ಟ್ ಕಿಟ್ ಹಾಗೂ 1 ಲಕ್ಷ ಪಲ್ಸ್ ಆಕ್ಸಿ ಮೀಟರ್ ಖರೀದಿಗೂ ಕಾರ್ಯಪಡೆ ಒಪ್ಪಿಗೆ ಕೊಟ್ಟಿದೆ ಎಂದರು ಡಿಸಿಎಂ.
ಹೊಸ ಆಮ್ಲಜನಕ ನೀತಿ
ರಾಜ್ಯದಲ್ಲಿ ಆಮ್ಲಜನಕ ಬಳಕೆ, ತಯಾರಿಕೆ, ಘಟಕಗಳ ಸ್ಥಾಪನೆ, ಮೂಲಸೌಕರ್ಯ ಸ್ಥಾಪನೆ, ನಿರ್ವಹಣೆ ಇತ್ಯಾದಿ ಅಂಶಗಳ ಬಗ್ಗೆ ಇನ್ನು 3-4 ದಿನಗಳಲ್ಲಿ ʼನೂತನ ಆಮ್ಲಜನಕ ನೀತಿʼಯನ್ನು ರೂಪಿಸಲಾಗುವುದು ಎಂದು ಪ್ರಕಟಿಸಿದ ಡಿಸಿಎಂ ಅವರು, ರಾಜ್ಯದಲ್ಲಿ ಈಗಾಗಲೇ ಆಮ್ಲಜನಕ ಕೊರತೆ ಬಹುತೇಕ ನೀಗುತ್ತಿದೆ ಎಂದರು.
ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ ಉದ್ದೇಶದಿಂದ DRDO ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲು ಕಾರ್ಯಪಡೆ ತೀರ್ಮಾನಿಸಿದೆ. ಪ್ರತಿ ಒಂದು ಯಂತ್ರಕ್ಕೆ 6ರಿಂದ 10 ಸಾವಿರ ರೂ. ಆಗುತ್ತದೆ ಎಂದ ಅವರು, 6 ಜಿಲ್ಲೆಗಳಲ್ಲಿ ಆಮ್ಲಜನಕ ಬಾಟ್ಲಿಂಗ್ ಯೂನಿಟ್ ಸ್ಥಾಪಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಬ್ಲ್ಯಾಕ್ ಫಂಗಸ್ ಔಷಧಿಗೆ ಬೇಡಿಕೆ
ಕೋವಿಡ್‌ನಿಂದ ಗುಣಮುಖರಾದವರಲ್ಲಿ ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ವಹಿಸಲಾಗಿದೆ. ಪ್ರತಿ ವಾರ 400 ರೋಗಿಗಳಿಗೆ ಈ ರೀತಿ ಬ್ಲಾಕ್ ಫಂಗಸ್ ಬರುವ ನಿರೀಕ್ಷೆ ಇದೆ ಎಂದು ತಾಂತ್ರಿಕ ಸಮಿತಿ ಅಂದಾಜು ಮಾಡಿದೆ. ಹೀಗಾಗಿ ವಾರಕ್ಕೆ ʼಆಂಪ್ಕೋಟೆರಿಸಿನ್ʼ ಔಷಧಿಯ 20,000 ವೈಲ್ಸ್ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆ ಹೆಚ್ಚಾದ ಕಾರಣಕ್ಕೆ ಈ ಔಷಧಿಯ ಕೊರತೆ ಉಂಟಾಗಿದೆ ಎನ್ನುವ ಮಾಹಿತಿಯನ್ನೂ ಡಿಸಿಎಂ ಹಂಚಿಕೊಂಡರು.
ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಬೆಡ್ʼಗಳಿವೆ. ಇದರಲ್ಲಿ 10 ಬೆಡ್ʼಗಳನ್ನು ಐಸಿಯು ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಇನ್ನು, ತಾಲೂಕು ಆಸ್ಪತ್ರೆಗಳಲ್ಲಿ 50 ಬೆಡ್ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರಲ್ಲಿ 15 ಬೆಡ್‌ಗಳಿಗೆ ವಂಟಿಲೇಟರ್ ಸೌಲಭ್ಯ ಇರುತ್ತದೆ. ಇನ್ನು 6 ಬೆಡ್‌ಗಳನ್ನು ತಾಯಿ-ಮಕ್ಕಳಿಗೆ ಮೀಸಲಿಡಲಾಗುವುದು. ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಬೆಡ್ ಐಸಿಯು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಡಿಸಿಎಂ ತಿಳಿಸಿದರು.
ಕೊವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿ- ಪ್ರತಿ ಬೆಡ್ ಗೆ ಗರಿಷ್ಠ 10 ರೂಪಾಯಿ ನೀಡಲು ತೀರ್ಮಾನ ಮಾಡಲಾಗಿದೆ. ಸರಕಾರಿ ಆಸ್ಪತ್ರೆ ಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ದಿನ ಇದಕ್ಕೆ ದರ ನಿಗದಿ ಮಾಡಿರಲಿಲ್ಲ ಎಂದು ಡಿಸಿಎಂ ಹೇಳಿದರು.
ವೈದ್ಯಕೀಯ ಬಳಕೆ ಸಾಮಗ್ರಿ ಕೊರತೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಕಾರ್ಯಪಡೆ ಸಭೆ ಒಪ್ಪಿಗೆ ನೀಡಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಇವುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಖಾಸಗಿ ವೈದ್ಯರು ಸಲಹೆ ನೀಡಿದ ಸೋಂಕಿತರಿಗೂ ಸರ್ಕಾರಿ ಮೆಡಿಕಲ್ ಕಿಟ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ವೈರಸ್ʼನ ಜೆನೆಟಿಕ್ಸ್ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ Genome Lab ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಎರಡು, ಆರೋಗ್ಯ ಇಲಾಖೆ ವತಿಯಿಂದ ಈ ಲ್ಯಾಬ್‌ಗಳನ್ನು ತೆರೆಯಲಾಗುವುದು ಎಂದ ಅವರು, ವೈರಸ್ ವರ್ತನೆಯ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದರು.
ಕೋವಿಡ್ ಕಾರ್ಯಪಡೆ ಸದಸ್ಯರೂ ಆದ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಸುರೇಶ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.