Home ಆರೋಗ್ಯ ಚಾಮರಾಜನಗರದ ಕೋವಿಡ್ ಆಸ್ಪತ್ರೆಗಳ ಬಲವರ್ಧನೆ ಮತ್ತಷ್ಟು ಕ್ರಮ: ಸುರೇಶ್ ಕುಮಾರ್

ಚಾಮರಾಜನಗರದ ಕೋವಿಡ್ ಆಸ್ಪತ್ರೆಗಳ ಬಲವರ್ಧನೆ ಮತ್ತಷ್ಟು ಕ್ರಮ: ಸುರೇಶ್ ಕುಮಾರ್

60
0

 ಬೆಂಗಳೂರು:

ತಾಲೂಕು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗಳ ಬಲವರ್ಧನೆ, ಕೋವಿಡ್ ತಪಾಸಣಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಹಾಗೂ ಹೋಂ ಐಸೊಲೇಷನ್‍ಗೆ ನಿಗದಿ ಮಾಡಲಾದ ಸೌಲಭ್ಯ ಇಲ್ಲದವರಿಗೆ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲು ಮಾಡುವ ಮೂಲಕ ಸೋಂಕು ವ್ಯಾಪಿಸದಂತೆ ತಡೆಯುವುದು ಸೇರಿದಂತೆ ಚಾಮರಾಜನಗರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಲವು ಮಹತ್ವದ ತೀರ್ಮಾನಗಳನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ  ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. 

ಜಿಲ್ಲೆಯ ಕೋವಿಡ್ ನಿಯಂತ್ರಣ ಸಂಬಂಧ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಗೂಗಲ್ ಮೀಟ್ ಮೂಲಕ ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆರೋಗ್ಯ ಅಧಿಕಾರಿ ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಜೊತೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಸಿದರು.

ಕೋವಿಡ್ ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಸಂಪೂರ್ಣವಾಗಿ ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಬೇಕೆ ಅಥವಾ ಕೋವಿಡ್ ಕೇರ್ ಕೇಂದ್ರ, ಹೋಂ ಐಸೊಲೇಷನ್‍ಗೆ ಶಿಫಾರಸು ಮಾಡಬೇಕೆ ಎಂಬ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸುಧಾರಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.

ತಾಲೂಕು ಆಸ್ಪತ್ರೆಗಳಲ್ಲಿ ಈ ಹಿಂದಿಗಿಂತಲೂ ತಪಾಸಣಾ ಕಾರ್ಯ ನಿರ್ವಹಣೆಗೆ ಕೈಗೊಳ್ಳಲಾಗಿರುವ ಉತ್ತಮ ಕ್ರಮಗಳ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ಪರಾಮರ್ಶೆ ನಡೆಸಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ ಕೋವಿಡ್ ತಡೆಗೆ ಆಸ್ಪತ್ರೆಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ಪಡೆದುಕೊಂಡು ಸೋಂಕಿತರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳುವುದನ್ನು ಮುಂದುವರೆಸಬೇಕು. ಈಗಾಗಲೇ ಆಸ್ಪತ್ರೆಗಳಿಗೆ ಅವಶ್ಯವಿರುವ ಪಿಜಿಷಿಯನ್ ಇನ್ನಿತರ ತಜ್ಞರ ನೇಮಕಾತಿಗಾಗಿ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಈಗಾಗಲೇ ಲಭ್ಯವಿರುವ ಆಮ್ಲಜನಕ ವ್ಯವಸ್ಥೆ ಹಾಗೂ ಪೂರೈಸಲಾಗಿರುವ ಆಮ್ಲಜನಕ ಕಾನ್ಸನ್‍ಟ್ರೇಟರ್‍ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ಬಲವರ್ಧನೆ ಮಾಡಬೇಕು ಎಂದರು.

ಹೋಂ ಐಸೊಲೇಷನ್‍ಗೆ ಶಿಫಾರಸು ಮಾಡುವ ಮೊದಲು ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕ ಕೊಠಡಿ ಇತರೆ ಸೌಲಭ್ಯಗಳು ಇವೆಯೇ ಎಂಬ ಬಗ್ಗೆ ಕಟ್ಟುನಿಟ್ಟಾಗಿ ಪರಿಶಿಲಿಸಬೇಕು. ಸಮರ್ಪಕ ಸೌಲಭ್ಯಗಳು ಇರದಿದ್ದಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು. ಕೋವಿಡ್ ಕೇಂದ್ರಗಳಲ್ಲಿ ಔಷದ, ಗುಣಮಟ್ಟದ ಊಟ, ಉಪಹಾರಗಳಿಗೆ ಕೊರತೆಯಾಗಬಾರದು. ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಾಗಿ ಬಿಡುಗಡೆಯಾಗುವವರ ಅನುಭವ ಹಾಗೂ ಅಭಿಪ್ರಾಯಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಕೋವಿಡ್ ಸಂಬಂಧಿ ತಡೆಗಾಗಿ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ನಿಗಾ ವ್ಯವಸ್ಥೆಗಾಗಿ ರಚಿಸಲಾಗಿರುವ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆಗಳು ಶಾಸಕರ ನೇತೃತ್ವದಲ್ಲಿ ನಡೆಸಲಾಗಿರುವುದು ತುಂಬಾ ಒಳ್ಳೆಯ ಕಾರ್ಯ. ಇದರಿಂದ ಸೋಂಕು ವ್ಯಾಪಿಸದಂತೆ ಮೇಲ್ವಿಚಾರಣೆ ಮಾಡಲು ಸಹಾಯಕವಾಗಲಿದೆ ಎಂದರು.

ಸೋಂಕಿತರಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿಯೇ ಕೋವಿಡ್ ತಪಾಸಣಾ ಪ್ರಕ್ರಿಯೆ ನಿರ್ವಹಿಸುವುದರಿಂದ ಸೋಂಕು ತಡೆಗೆ ಮತ್ತಷ್ಟು ಅನುಕೂಲವಾಗಲಿದೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ವಿಶೇಷ ಚೇತನರಿಗೆ ನೆಲ ಮಹಡಿಯಲ್ಲಿಯೇ ಅವಕಾಶ ಕಲ್ಪಿಸಬೇಕು. ಅವರಿಗಾಗಿಯೇ ಅನುಕೂಲವಾಗುವಂತಹ ಶೌಚಾಲಯಗಳ ನಿರ್ಮಾಣಕ್ಕೂ ಗಮನಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.

ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ ಕೋವಿಡ್ ನಿರ್ವಹಣೆಗೆ ಕಾರ್ಯಗಳಿಗೆ ತಮ್ಮ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ದಿ ಅನುದಾನದ ಎರಡನೇ ಕಂತಿನಲ್ಲಿ 50 ಲಕ್ಷ ರೂಗಳನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚು ನಿಗಾವಹಿಸಬೇಕು. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯಗಳು ಸಂಪೂರ್ಣವಾಗಿ ದೊರಕಬೇಕು. ಯಾವುದೇ ಕೊರತೆಗಳಿಗೆ ಅವಕಾಶವಾಗದಂತೆ ಸೋಂಕಿತರು ಗುಣಮುಖರಾಗಲು ಅವಶ್ಯವಿರುವ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು.

ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಇಂದು ನಡೆಸಲಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಒಂದೇ ಗ್ರಾಮದಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದಿವೆ. ಇಂತಹ ಕಡೆ ಕಂಟೈನ್‍ಮೆಂಟ್ ವಲಯಗಳನ್ನಾಗಿ ಘೋಷಿಸಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳುವುದರಿಂದ ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡಲಾಗಿದೆ ಎಂದರು. 

ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಕೊಳ್ಳೇಗಾಲ ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇಲ್ಲಿನ ಆಸ್ಪತ್ರೆಯನ್ನು ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವುದರಿಂದ ಚಿಕಿತ್ಸೆ ಕ್ರಮಗಳಿಗೆ ಅನುಕೂಲವಾಗುತ್ತದೆ. ತಿಮ್ಮರಾಜಿಪುರದಲ್ಲಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಈಗಾಗಲೇ 105 ಮಂದಿ ದಾಖಲಾಗಿದ್ದಾರೆ. ಐ.ಎಲ್.ಐ, ಸಾರಿ ಪ್ರಕರಣಗಳ ಪತ್ತೆ ಹಚ್ಚುವಿಕೆಗಾಗಿ ಕೈಗೊಂಡಿರುವ ಸಮೀಕ್ಷೆ ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ಮಾತನಾಡಿ ತಾಲೂಕಿನಲ್ಲಿ ಕೋವಿಡ್ ತಡೆ ಕ್ರಮಗಳಿಗೆ ಗಮನಹರಿಸಲಾಗಿದೆ. ತಾಲೂಕಿಗೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಹೆಚ್ಚು ಒದಗಿಸಬೇಕೆಂದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ ಸೋಂಕು ಹೆಚ್ಚು ಕಂಡುಬರುತ್ತಿರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ರ್ಯಾಟ್ ಮೂಲಕ ಕೋವಿಡ್ ಪರೀಕ್ಷೆಯನ್ನು ಆಯಾ ಭಾಗದಲ್ಲಿಯೇ ಮಾಡಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. ಅಲ್ಲಿಯೇ ಕೋವಿಡ್ ತಪಾಸಣೆ ನಡೆಸುವುದರಿಂದ ಸೋಂಕಿತರನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ಇದರಿಂದ ಸೋಂಕು ವ್ಯಾಪಿಸದಂತೆ ತಡೆಯಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಮಾತನಾಡಿ ಲಾಕ್ ಡೌನ್ ಅವಧಿಯಲ್ಲಿ ಅತೀ ಹೆಚ್ಚು ನಿಗಾವಹಿಸಲಾಗಿದೆ. ಕಳೆದ 3 ದಿನಗಳ ಅವಧಿಯಲ್ಲಿಯೂ ಜಿಲ್ಲೆಯಲ್ಲಿ ಜಾರಿ ಮಾಡಲಾಗಿರುವ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಒಟ್ಟು 1319 ವಾಹನಗಳನ್ನು ಜಪ್ತಿ ಮಾಡಲಾಗಿದೆ. 162 ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್ ರಾವ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನವಾಗುತ್ತಿದೆ. ಸ್ಯಾನಿಟೈಜ್ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ನೋಡಲ್ ಅಧಿಕಾರಿಗಳಾದ ಅರಣ್ಯ ಉಪಸಂರಕ್ಷಣಾಧಿಕಾರಿ ಡಾ. ಸಂತೋಷ್ ಕುಮಾರ್, ಏಡುಕೊಂಡಲು, ಆರ್.ಸಿ.ಹೆಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here