ಬೆಂಗಳೂರು:
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ 10 ದಿನಗಳ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ ಕಂಡಿದೆ.
ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ 30 ಪುಟಗಳ ಭಾಷಣವನ್ನು ರಾಜ್ಯಪಾಲರು ಮಾಡಿದರು.
ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ ಎಂದು ಶ್ಲಾಘಿಸಿದರು. ರಾಜ್ಯದಲ್ಲಿ ದೈನಂದಿನ 6 ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ದಿನಾಂಕ ಜನವರಿ 23ರವರೆಗೆ ಒಟ್ಟು 9.33 ಕೋಟಿ ಅರ್ಹ ಫಲಾನುಭವಿಗಳಿಗೆ (1ನೇ ಡೋಸ್ 4.89 ಕೋಟಿ, 2ನೇ ಡೋಸ್ 4.18 ಕೋಟಿ) ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 100ರಷ್ಟು ಜನರಿಗೆ ಮೊದಲನೇ ಡೋಸ್ ಹಾಗೂ ಶೇ.85ರಷ್ಟು ಜನರಿಗೆ ಕೋವಿಡ್ ನ ಎರಡೂ ಡೋಸ್ ಗಳನ್ನು ನೀಡಲಾಗಿದೆ ಎಂದರು.

ಕರ್ನಾಟಕದಲ್ಲಿ ಒಟ್ಟು 6 ಕೋಟಿ ಕೋವಿಡ್ ಟೆಸ್ಟ್ ಗಳನ್ನು ನಡೆಸಲಾಗಿದೆ. ದೇಶದಲ್ಲಿಯೇ ಹೆಚ್ಚು ಟೆಸ್ಟ್ ಗಳನ್ನು ನಡೆಸಿದ ರಾಜ್ಯಗಳಲ್ಲಿ ಒಂದು. ಕೋವಿಡ್-19ರ ಹೊಸ ರೂಪಾಂತರಿ ತಳಿಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರಾಜ್ಯದಲ್ಲಿ ಐದು INSACOG ಪ್ರಮಾಣಿತ ಪ್ರಯೋಗ ಶಾಲೆಗಳು ಲಭ್ಯವಿದೆ. ರಾಜ್ಯಗಳ ಆಸ್ಪತ್ರೆಗಳಲ್ಲಿ 55,256 ಎಚ್‌ಡಿಯು ಬೆಡ್ ಗಳು, 7216 ಐಸಿಯು ಬೆಡ್ ಗಳು, 123 ಐಸಿಯು ವೆಂಟಿಲೇಟರ್ (ಒಟ್ಟು 1,94,363) ಬೆಡ್ ಗಳು ಲಭ್ಯ ಇವೆ ಎಂದರು.
ರಾಜ್ಯ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ರಾಜ್ಯಪಾಲರು, ಕೇಂದ್ರದ ಆತ್ಮನಿರ್ಭರ್ ಯೋಜನೆ ಹೊಗಳಿದರು. ಕೋವಿಡ್ ವೇಳೆ ದುಡಿದ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.