ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಪರಿಶೀಲನೆ
ಬೆಂಗಳೂರ್:
ಬಿಬಿಎಂಪಿ ವತಿಯಿಂದ ಇಂದು 4 ಅಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಂದೇ ದಿನದಲ್ಲಿ 6,000 ಆರೋಗ್ಯ ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ ಎಂದು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ರವರು ತಿಳಿಸಿದರು.
ಮಣಿಪಾಲ್ ಆಸ್ಪತ್ರೆ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ, ಮಣಿಪಾಲ್ ಆಸ್ಪತ್ರೆಯಲ್ಲಿ 4,052 ಆರೋಗ್ಯ ಸಿಬ್ಬಂದಿಗಳಿದ್ದು, ಇಂದು ಮಣಿಪಾಲ್ ಆಸ್ಪತ್ರೆ ಯಲ್ಲಿ 43 ಸ್ಥಳಗಳನ್ನು ಗುರುತಿಸಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ 11 ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 1,376, ಸೆಂಟ್ ಫಿಲೊಮಿನಾ ಮತ್ತು ನರ್ಸಿಂಗ್ ಕಾಲೇಜಿನಲ್ಲಿ 7 ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 700 ಆರೋಗ್ಯ ಸಿಬ್ಬಂದಿ ಹಾಗೂ ಕಾಕ್ಸ್ ಟೌನ್ ಪಾಲಿಕೆಯ ಹೆರಿಗೆ ಆಸ್ಪತ್ರೆಯ 1 ಲಸಿಕಾ ಕೇಂದ್ರದಲ್ಲಿ 98 ಆರೋಗ್ಯ ಸೇವಾ ಸಿಬ್ಬಂದಿಗೆ ಇಂದು ಲಸಿಕೆ ನೀಡಲಾಗುತ್ತಿದೆ. 4 ಆಸ್ಪತ್ರೆಯಲ್ಲಿ ಒಟ್ಟು 6,226 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಸಂಜೆ 5.30ರವರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವುದರಿಂದ ಯಾರಿಗೂ ವ್ಯತಿರಿಕ್ತ ಪರಿಣಾಮ ಬೀರಿಲ್ಲವೆಂದು ಅಯುಕ್ತರು ತಿಳಿಸಿದರು.
ನಾಳೆ ಪಾಲಿಕೆ ವ್ಯಾಪ್ತಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 7,300 ಸಿಬ್ಬಂದಿಯಿದ್ದು, ನಾಳೆಯಿಂದ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಇದೇರೀತಿ ನಗರದಲ್ಲಿ 106 ಖಾಸಗಿ ಆಸ್ಪತ್ರೆಗಳಲ್ಲಿ 42,000 ಸಿಬ್ಬಂದಿ ಹಾಗೂ 9 ವೈದ್ಯಕೀಯ ಕಾಲೇಜುಗಳಲ್ಲಿ 28,000 ಸಿಬ್ಬಂದಿಗೆ ನಾಳೆಯಿಂದ ಲಸಿಕೆ ನೀಡಲು ಪ್ರಾರಂಭಿಸಲಾಗುತ್ತದೆ. ಕೋವಿನ್ ಪೋರ್ಟಲ್ ನಲ್ಲಿ ಆರೋಗ್ಯ ಕಾರ್ಯಕರ್ತರು ಇನ್ನೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಂಡ ಅಷ್ಟೂ ಫಲಾನುಭವಿಗಳಿಗೆ ಒಂದು ವಾರದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಇದೀಗ ಪಾಲಿಕೆಗೆ 1,82,000 ಲಸಿಕೆ ಯಲ್ಲಿ ಇದುವರೆಗೆ 1,05,000 ಲಸಿಕೆ ಬಂದಿದ್ದು, 2ನೇ ಹಂತದಲ್ಲಿ ಉಳಿದ ಲಸಿಕೆ ಬರಲಿದೆ ಎಂದರು.
ಲಸಿಕೆ ನೀಡಲು ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಲಸಿಕೆ ಪಡೆಯುವವರು ಕಡ್ಡಾಯವಾಗಿ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ಒ.ಟಿ.ಪಿ ಹೋಗಿಲ್ಲವೆಂದರೆ ಆಫ್ ಲೈನ್ ಮೂಲಕವೂ ನಿಖರ ಮಾಹಿತಿ ಸಂಗ್ರಹಿಸಿ ಲಸಿಕೆ ನೀಡಬಹುದಾಗಿದೆ. ಕೋವಿನ್ ಪೋರ್ಟಲ್ ಕಾರ್ಯನಿರ್ವಹಿಸದ ವೇಳೆ ಆಫ್ ಲೈನ್ ಮೂಲಕ ಮಾಹಿತಿ ಸಂಗ್ರಹಿಸಿಕೊಂಡು ತದನಂತರ ಪೋರ್ಟಲ್ ನಲ್ಲಿ ಮಾಹಿತಿ ದಾಖಲಿಸಬಹುದಾಗಿದೆ. ನೆನ್ನೆ ಪಾಲಿಕೆ ವ್ಯಾಪ್ತಿಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು. ಅದರಲ್ಲಿ 475 ಮಂದಿಗೆ ಮಾತ್ರ ಸಂದೇಶ ಕಳುಹಿಸಲು ಸಾಧ್ಯವಾಗಿದೆ. 475 ಫಲಾನುಭವಿಗಳಲ್ಲಿ 345 ಮಂದಿ ಲಸಿಕೆ ಪಡೆದಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಜೊತೆ ಮಾತನಾಡಿ ಮ್ಯಾನ್ಯುಯಲ್ ಮುಖಾಂತರವೂ ದಾಖಲಾತಿ ಸಂಗ್ರಹಿಸಿ ಫಲಾನುಭವಿಗಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರ ಪಾಲಿಕೆಗೆ ನೀಡಿದ ಬಳಿಕ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆ ಬಳಿಕ ಲಸಿಕೆ ನೀಡುವ ಹಿಂದಿನ ದಿನ 141 ಕೋಲ್ಡ್ ಚೈನ್ ಪಾಯಿಂಟ್ ಗಳಿಗೆ ದಾಸಪ್ಪ ಆಸ್ಪತ್ರೆಯಿಂದ ವಾಹನಗಳ ಮೂಲಕ ಕೋಲ್ಡ್ ಬಾಕ್ಸ್ ಗಳಲ್ಲಿ ಕಳುಹಿಸಲಾಗುತ್ತದೆ. ಲಸಿಕೆ ನೀಡುವ ದಿನ ಕೋಲ್ಡ್ ಚೈನ್ ಪಾಯಿಂಟ್ ನಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಅವಶ್ಯಕ ಲಸಿಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಸುದರ್ಶನ್ ಬಲ್ಲಾಳ್ ರವರು ಮಾತನಾಡಿ, ನಗರದಲ್ಲಿ ಕೋವಿಡ್ ನಿಯಂತ್ರಿಸಲು ಪಾಲಿಕೆ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಿದ್ದು, ಕೊವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ 4,000 ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಬಹುತೇಕ ಸಿಬ್ಬಂದಿ ಇಂದು ಲಸಿಕೆ ಪಡೆಯಲಿದ್ದಾರೆ. ಕೋವಿಡ್ ಬಗ್ಗೆ ಊಹಾಪೋಹಗಳಿಗೆ ಯಾರೂ ಕೊವಿಗೊಡಬಾರದು. ಇದೀಗ ಕೋವಿಡ್ ತಡೆಯಲು ವ್ಯಾಕ್ಸಿನ್ ಬಂದಿದೆ. ಆದರೂ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಮಾಡಿಕೊಳ್ಳುವುದನ್ನು ತಪ್ಪದೆ ಪಾಲಿಸಿದಾಗ ಮಾತ್ರ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದು ಹೇಳಿದರು.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಸುದರ್ಶನ್ ಬಲ್ಲಾಳ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.