Home ಬೆಳಗಾವಿ ರೈತರ ಬೆಳೆ ಪರಿಹಾರ ಮೊತ್ತ ಹೆಚ್ಚಳ- ರಾಜ್ಯದಿಂದ 1200 ಕೋಟಿ ರೂ. ಹೆಚ್ಚುವರಿ ಪರಿಹಾರ :...

ರೈತರ ಬೆಳೆ ಪರಿಹಾರ ಮೊತ್ತ ಹೆಚ್ಚಳ- ರಾಜ್ಯದಿಂದ 1200 ಕೋಟಿ ರೂ. ಹೆಚ್ಚುವರಿ ಪರಿಹಾರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

25
0
Congress is an irresponsible opposition party: CM Bommai
bengaluru

ಬೆಳಗಾವಿ:

ರಾಜ್ಯದಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಒಟ್ಟು ೧೦ ಲಕ್ಷಕ್ಕೂ ಹೆಚ್ಚಿನ ರೈತರಿಗೆ ೯೬೯ ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ ಎಂದರು.

ಎನ್.ಡಿ.ಆರ್. ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 6800/- ರೂ. ಪರಿಹಾರ ನಿಗದಿಪಡಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ಇನ್ನೂ 6,800 ರೂ. ಸೇರಿಸಿ, 13600 ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಅಂತೆಯೇ ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ 13,500 ರೂ. ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ 11,500 ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‌ಗೆ 25,000 ರೂ ದೊರೆಯಲಿದೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ 18,000 ರೂ. ಪರಿಹಾರ ನಿಗದಿ ಪಡಿಸಿದ್ದು, ರಾಜ್ಯದ ಬೊಕ್ಕಸದಿಂದ ಇದಕ್ಕೆ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

bengaluru

ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1200 ಕೋಟಿ ರೂ. ಹೊರೆ ಉಂಟಾಗಲಿದೆ ಎಂದು ಅವರು ಸದನದಲ್ಲಿ ತಿಳಿಸಿದರು.

48 ಗಂಟೆಗಳಲ್ಲಿ ಪರಿಹಾರ: ರಾಜ್ಯದ ಇತಿಹಾಸದಲ್ಲಿಯೇ ಮೊದಲು ಹಿಂದಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ನದಿ ತಟದಲ್ಲಿರುವ 10-15 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು. ಆದರೆ ಈ ಬಾರಿ ಅತಿವೃಷ್ಟಿಯಿಂದ ರಾಜ್ಯಾದ್ಯಂತ ನಷ್ಟ ಸಂಭವಿಸಿದೆ. ಚಿಕ್ಕಬಳ್ಳಾಪುರ, ಕೋಲಾರಗಳಂತಹ ಅತ್ಯಂತ ಬರ ಪೀಡಿತ ಜಿಲ್ಲೆಗಳಲ್ಲೂ ಕೆರೆ-ಕಟ್ಟೆ ತುಂಬಿ ಒಡೆದಿದೆ.

ಬೆಳೆದು ನಿಂತ ಪೈರಿಗೆ ಹಾನಿಯಾಗಿ, ಬೆಳೆ ಕೈಗೆ ಸಿಗುವ ಕಾಲದಲ್ಲಿ ರೈತರಿಗೆ ನಷ್ಟವಾಗಿದೆ. ರೈತರ ಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ಅಧಿಕಾರಿಗಳಿಗೆ ಕೂಡಲೇ ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಮಾಡುವಂತೆ ಹಾಗೂ ಮಾಹಿತಿ ಅಪ್ ಲೋಡ್ ಆದ 48 ಗಂಟೆಗಳೊಳಗೆ ಪರಿಹಾರ ವಿತರಿಸುವಂತೆ ಸೂಚನೆ ನೀಡಲಾಯಿತು. ಅದರಂತೆ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಂಟಿ ಸಮೀಕ್ಷೆ ವರದಿ ಅಪ್ ಲೋಡ್ ಆದ 48 ಗಂಟೆಯೊಳಗೆ ನಮ್ಮ ಸರ್ಕಾರ ಪರಿಹಾರ ವಿತರಿಸಿದೆ. ಈ ವರೆಗೆ 10 ಲಕ್ಷಕ್ಕೂ ಹೆಚ್ಚು ರೈತರಿಗೆ 969 ಕೋಟಿ ರೂ. ತಲುಪಿರುವುದು ಒಂದು ದಾಖಲೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅತಿವೃಷ್ಟಿಯಿಂದ 12.69 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪರಿಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ರೈತ ವಿದ್ಯಾನಿಧಿ: ನಮ್ಮ ಸರ್ಕಾರ ಸದಾ ರೈತರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಿಂದ ತ್ವರಿತ ಪರಿಹಾರ ವಿತರಣೆಯ ವರೆಗೆ ಹಲವು ರೀತಿಯಲ್ಲಿ ಬೆಂಬಲ ನೀಡಿದೆ. ಇದೀಗ ಸದನದ ಒಟ್ಟಾರೆ ಅಭಿಪ್ರಾಯವನ್ನು ಗಮನಿಸಿ ಹೆಚ್ಚುವರಿ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ನುಡಿದರು.

ರೈತ ವಿದ್ಯಾನಿಧಿ ಯೋಜನೆಯಡಿ ಪಿ.ಯು.ಸಿ.ಯ 2.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಪದವಿ ಶಿಕ್ಷಣಕ್ಕೆ ಈಗ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಅರ್ಹರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

bengaluru

LEAVE A REPLY

Please enter your comment!
Please enter your name here