ಬೆಳಗಾವಿ:
ಬೆಳಗಾವಿಯಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಯಾಗಿ, ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಬಿಟ್ಟು ಹೋಗಿದ್ದು, 7600 ಮನೆಗಳಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ವಿಧಾನಸಭೆಯಲ್ಲಿ ನಿಯಮ 69ರಡಿ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಕುರಿತ ಚರ್ಚಗೆ ಉತ್ತರಿಸುತ್ತ ಈ ವಿಷಯ ತಿಳಿಸಿದರು.
2019ರಲ್ಲಿ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಹಾನಿಯಾಗಿತ್ತು. ಮನೆಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಮೂರು ಬಾರಿ ಅವಧಿ ವಿಸ್ತರಿಸಿದ್ದರೂ, ಸುಮಾರು 7,700 ಕ್ಕಿಂತ ಹೆಚ್ಚು ಮನೆಗಳ ವಿವರ ದಾಖಲಿಸಿರಲಿಲ್ಲ. ಈ ಮನೆಗಳ ವಸ್ತುಸ್ಥಿತಿಯನ್ನು ಪರಿಶೀಲಿಸಿ, ಅರ್ಹ 7600 ಮನೆಗಳಿಗೆ ಅನುಮೋದನೆ ನೀಡಿ, ಪರಿಹಾರ ಬಿಡುಗಡೆ ಮಾಡಲಾಗಿದೆ.
2020-21ರಲ್ಲಿ ಇಂತಹ ಯಾವುದೇ ತೊಡಕು ಉದ್ಭವಿಸಿಲ್ಲ. 2021-22ನೇ ಸಾಲಿನಲ್ಲಿ ತಹಸೀಲ್ದಾರರ ವರದಿ ಆಧರಿಸಿ, ಅನುಮೋದನೆ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪೂರ್ಣ ಹಾನಿಗೀಡಾಗಿದ್ದ 36,698 ಮನೆಗಳ ಪೈಕಿ 18,589 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 7000 ಮನೆಗಳು ಬಹುತೇಕ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ಕೆಲವು ಕಾನೂನು ತೊಡಕು, ಆಡಳಿತಾತ್ಮಕ ತೊಡಕುಗಳ ಹಿನ್ನೆಲೆಯಲ್ಲಿ 3130 ಮನೆಗಳ ನಿರ್ಮಾಣ ಪ್ರಾರಂಭವಾಗಿಲ್ಲ. ಈ ತೊಡಕುಗಳ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.