- ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸಭೆ
- ವಾರ್ ರೂಂ ಪರಿಶೀಲನೆ
- ಆಮ್ಲಜನಕ, ರೆಮಿಡಿಸ್ವಿರ್ ಕೊರತೆ ಆಗದಂತೆ ಕ್ರಮ
- ಹಾಸಿಗೆ ಹೆಚ್ಚಳಕ್ಕೂ ಆದೇಶ
ಕೋಲಾರ:
ಇಲ್ಲಿನ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಕೋಲಾರಕ್ಕೆ ಮಂಗಳವಾರ ಧಾವಿಸಿ ಬಂದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಇಡೀ ಕೋವಿಡ್ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಪರಿಶೀಲನೆ ನಡೆಸಿದರು.
ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯೂ ಸಾಕಷ್ಟು ಸಮಸ್ಯೆಗೀಡಾಗಿದ್ದು ಆಮ್ಲಜನಕ, ರೆಮಿಡಿಸ್ವಿರ್, ಐಸಿಯು ಹಾಸಿಗೆಗಳು, ವೆಂಟಿಲೇಟರ್, ರಿಮೋಟ್ ಐಸಿಯು, ಕೋವಿಡ್ ಪರೀಕ್ಷೆ, ಫಲಿತಾಂಶ ಮತ್ತಿತರೆ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿದರಲ್ಲದೆ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ, ಆಸ್ಪತ್ರೆ ಹಾಗೂ ಕೋವಿಡ್ ವಾರ್ ರೂಂನಲ್ಲಿರುವ ಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಜತೆಗೆ, ವಾರ್ ರೂಮ್ ಸಿಬ್ಬಂದಿ ಜತೆ ಸಮಾಲೋಚನೆಯನ್ನೂ ನಡೆಸಿದರು.
ಕೋಲಾರದಲ್ಲಿರುವ ಡಿಜಿಟಲ್ ಅರೋಗ್ಯ ವಾಹಿನಿಯಲ್ಲಿರುವ ಕೋವಿಡ್ ವಾರ್ ರೂಮಿಗೆ ಭೇಟಿ ನೀಡಿದರಲ್ಲದೆ, ಎರಡನೇ ಅಲೆ ತಡೆಗಟ್ಟುತ್ತಿರುವ ವಿಧಾನವನ್ನು ಪರಿಶೀಲಿಸಿದರು. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರವವರ ಬಗ್ಗೆ ಮಾಹಿತಿ ಪಡೆದರಲ್ಲದೆ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದನ್ನು ಮತ್ತಷ್ಟು ಉತ್ತಮಪಡಿಸುವ ಬಗ್ಗೆ ವೈದ್ಯರಿಗೆ ಸಲಹೆ ನೀಡಿದರು ಉಪ ಮುಖ್ಯಮಂತ್ರಿ.
ಮಾಹಿತಿ ಕೊರತೆ, ಡಿಸಿಎಂ ಕಿಡಿ
ಕೋವಿಡ್ ಎರಡೂ ಅಲೆಗಳ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದವರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣಕ್ಕೆ ಡಾ.ಆಶ್ವತ್ಥನಾರಾಯಣ, ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಮೊದಲ ಅಲೆ ಬಂದಾಗಿನಿಂದ ಏನು ಮಾಡುತ್ತಿದ್ದೀರಿ? ಎಷ್ಟು ಸೋಂಕಿತರು ಬಂದರು? ಎಷ್ಟು ಜನ ದಾಖಲಾದರು? ಎಷ್ಟು ಜನ ಚಿಕಿತ್ಸೆ ಪಡೆದರು? ಇತ್ಯಾದಿ ಮಾಹಿತಿ ಇಲ್ಲದಿದ್ದರೆ ಹೇಗೆ? ಸರಿಯಾಗಿ ಮಾಹಿತಿಯೇ ಇಲ್ಲದಿದ್ದರೆ ನೀವು ಉತ್ತಮ ಸೌಲಭ್ಯ ನೀಡಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಎಂದು ತರಾಟೆಗೆ ತೆಗೆದುಕೊಂಡರು.
ಕೋಲಾರ ವಾರ್ ರೂಂ ಚೆನ್ನಾಗಿದೆ
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಕೋವಿಡ್ ಸೋಂಕಿತರಾಗಿ ಮನೆಗಳಲ್ಲಿ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರವವರ ಮಾಹಿತಿಯನ್ನು ಸರಿಯಾಗಿ ಸಂಗ್ರಹ ಮಾಡಬೇಕೆಂದು ಸೂಚಿಸಲಾಗಿದೆ. ಪ್ರತಿ ಮಾಹಿತಿಯನ್ನು ಕೋವಿಡ್ ವಾರ್ ರೂಂಗೆ ಅಪ್‌ಡೇಟ್ ಮಾಡಬೇಕು. ಪ್ರತಿ ಸೋಂಕಿನ ಮಾಹಿತಿಯನ್ನು ಚಾಚೂ ತಪ್ಪದೇ ಇಟ್ಟಿರಬೇಕು. ಹೋಮ್ ಐಸೋಲೇಷನ್ ಆದವರು ಮಾತ್ರವಲ್ಲ ಉಳಿದೆಲ್ಲ ಸೋಂಕಿತರಿಗೆ ಇರುವ ಸೌಲಭ್ಯ ಮತ್ತಿತರೆ ಎಲ್ಲ ಅಂಶಗಳ ಬಗ್ಗೆಯೂ ಕಾಲ್ ಸೆಂಟರ್‌ಗೆ ಮಾಹಿತಿ ನೀಡಬೇಕು ಎಂದರು.
ಹಾಗೆ ನೋಡಿದರೆ, ಕೋಲಾರ್ ವಾರ್ ರೂಂ ಬಹಳ ಚೆನ್ನಾಗಿದೆ. ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದ ಡಿಸಿಎಂ, ಜಿಲ್ಲೆಯ ಸಮಗ್ರ ಮಾಹಿತಿಯನ್ನೂ ಇಲ್ಲಿಗೆ ಒದಗಿಸಿದರೆ ಸರಕಾರಕ್ಕೆ ಸೌಲಭ್ಯಗಳನ್ನು ಕೊಡುವುದು ಸುಲಭವಾಗುತ್ತದೆ ಎಂದರು.
ಕೋವಿಡ್ ಚಿಕಿತ್ಸೆಗೆಂದೇ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೀಸಲಿಡಲು ಚಿಂತಿಸಿದ್ದು, ಹೆರಿಗೆ ಆಗಬೇಕಾಗಿರುವ ಮಹಿಳೆಯರಿಗೆ ಕೋಲಾರದ SNR ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು.
— Dr. Ashwathnarayan C. N. (@drashwathcn) April 27, 2021
ಆಕ್ಸಿಜನ್, ಇನ್ನಿತರ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗುವುದು. ಸೋಂಕಿತರ ಚಿಕಿತ್ಸೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಸಕ್ರಿಯವಾಗುವಂತೆ ಸೂಚಿಸಲಾಗಿದೆ.
2/3
ಔಷಧಿ ಕೊರತೆ ಆಗಬಾರದು
ಯಾವುದೇ ಕಾರಣಕ್ಕೂ ಹೊರಗೆ ಭೇಟಿ ನೀಡುವ ಸಿಬ್ಬಂದಿ ಕೈಯ್ಯಲ್ಲಿ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಇವತ್ತು ಶೇ.80ರಿಂದ 90ರಷ್ಟು ಸೋಂಕಿತರು ಮನೆಗಳಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಔಷಧಿ ಕೊರತೆ ಇರಬಾರದು. ಔಷಧಿಯ ಜತೆಗೆ ಅವರಿಗೆ ಅಗತ್ಯ ಮಾಹಿತಿಯನ್ನೂ ಕಾಲ ಕಾಲಕ್ಕೆ ಕೊಡುತ್ತಿರಬೇಕು ಎಂದು ತಾಕೀತು ಮಾಡಿದ್ದೇನೆಂದು ಡಿಸಿಎಂ ತಿಳಿಸಿದರು.
ರೋಗ ಲಕ್ಷಣ ಇದ್ದವರ ಪರೀಕ್ಷೆ
ಕೋಲಾರದಲ್ಲಿ ದಿನಕ್ಕೆ 1,400 ಜನರ ಸ್ಯಾಂಪಲ್ ಪರೀಕ್ಷೆ ನಡೆಯುತ್ತಿತ್ತು. ಇದುವರೆಗೂ ಇಲ್ಲಿ ʼಎʼ ಸಿಂಪ್ಟ್ಯಾಮಿಕ್ ಹೊಂದಿರುವವರ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಇನ್ನು ಮುಂದೆ ರೋಗ ಲಕ್ಷಣ ಇರುವವರ ಸ್ಯಾಂಪಲ್ ಮಾತ್ರ ತೆಗೆದುಕೊಳ್ಳಿ ಎಂದು ಸೂಚಿಸಿದ್ದೇನೆ. ದಿನಕೆ ಸರಾಸರಿ 300 ಜನರಿಗೆ ಪಾಸಿಟೀವ್ ಬರುತ್ತಿದೆ. ಸ್ಯಾಂಪಲ್ ಪಡೆಯುವುದರ ಜತೆಗೆ ಅಷ್ಟೇ ಬೇಗ ರಿಸಲ್ಟ್ ಕೂಡ ಕೊಡಬೇಕು. ಆಯಾ ದಿನ ಸಂಗ್ರಹ ಮಾಡಿದ ದಿನವೇ ರಿಸಲ್ಟ್ ಕೊಡಲೇಬೇಕು. ಬಾಕಿ ಉಳಿಸಿಕೊಳ್ಳಬಾರದು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ 6,500 ಸ್ಯಾಂಪಲ್ ಬಾಕಿ ಇದೆ. ಅದನ್ನು ಕೂಡಲೇ ಕ್ಲಿಯರ್ ಮಾಡಬೇಕು. ಪಾಸಿಟೀವ್ ಬಂದ ಕೂಡಲೇ ಚಿಕಿತ್ಸೆ ಆರಂಭ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಮಾನ್ಯ ಉಪಮುಖ್ಯಮಂತ್ರಿ @drashwathcn
— Office of Dr. Ashwathnarayan (@OfficeofAshwath) April 27, 2021
ಅವರು ಕೋಲಾರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಎಲ್ಲಾ ಭಾಗದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋಲಾರದ ಜನತೆಗೆ ಯಾವುದೇ ಸಮಸ್ಯೆ ಆಗದಂತೆ ಕೋವಿಡ್ ನಿಯಂತ್ರಣಾ ಕಾರ್ಯವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದರು.@bjp_muniswamy @YAN_MLC pic.twitter.com/AlLVLjXJS4
ಆಮ್ಲಜನಕ ಪೂರೈಕೆ ಬಗ್ಗೆ ಪರಿಶೀಲನೆ ನಡಸಿದ್ದೇನೆ. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಒಂದು ಜಂಬೋ ಸಿಲಿಂಡರ್, ಒಂದು ಡ್ಯೂರಾ ಸಿಲಿಂಡರ್ ಇದೆ. ಅವುಗಳ ಸಂಗ್ರಹ ಪ್ರಮಾಣ 6 ಸಾವಿರ ಲೀಟರ್‌ಗೆ ಹೆಚ್ಚಿಸಲು ಸೂಚಿಸಿದ್ದೇನೆ. ಐಸಿಯುಗೆ ಪ್ರತ್ಯೇಕ ಪೈಪ್‌ಲೈನ್ ಮಾಡಲಾಗುವುದು, ಈಗಿರುವ ಪೈಪ್‌ಲೈನ್‌ಗೆ 60 ಪಾಯಿಂಟ್ಸ್ ಕ್ಯಾರಿ ಮಾಡುವ ಸಾಮರ್ಥ್ಯ ಇದೆ. ಅದನ್ನು 200 ಪಾಯಂಟ್ಸ್ ಪ್ರಮಾಣಕ್ಕೆ ಹೆಚ್ಚಿಸಲಾಗುವುದು ಎಂದರು ಅವರು.
ಆಸ್ಪತ್ರೆಯಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಈಗ ಆಸ್ಪತ್ರೆಯಲ್ಲಿ 500 ಬೆಡ್‌ಗಳಿವೆ. ಅದರಲ್ಲಿ 100 ಹಾಸಿಗೆಗಳನ್ನು ಮಕ್ಕಳು, ತಾಯಂದಿರಿಗೆ ಮೀಸಲು ಇಡಲಾಗಿದೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸ್ವೀರ್ ಸೇರಿ ಸಾಕಷ್ಟು ಔಷಧಿ ಸಂಗ್ರಹ ಇದೆ. ಅಗತ್ಯವಾದರೆ ಖಾಸಗಿ ಆಸ್ಪತ್ರೆಯವರು ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿ ತಕ್ಷಣ ಪಡೆಯಬಹುದು ಎಂದ ಅವರು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಯನ್ನು ಚುರುಕು ಮಾಡಬೇಕು ಹಾಗೂ ವ್ಯಾಕ್ಸಿನೇಷನ್ ಅಭಿಯಾನಕ್ಕೆ ವೇಗ ಕೊಡಬೇಕು ಎಂದು ಸೂಚಿಸಿದ್ದೇನೆ ಎಂದರು.
ಕೋಲಾರ ಲೋಕಸಭೆ ಸದಸ್ಯ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಶಾಸಕ ಶ್ರೀನಿವಾಸ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಅವರು ಡಿಸಿಎಂ ಜತೆಯಲ್ಲಿದ್ದರು. ಶಾಸಕಿ ರೂಪಾ ಶಶಿದರ, ನಂಜೇಗೌಡ ಅವರು ವರ್ಚುವಲ್ ಮೂಲಕ ಡಿಸಿಎಂ ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.