Home ಚಾಮರಾಜನಗರ ಚಾಮರಾಜನಗರ ಜಿಲ್ಲೆಗೆ ವಿವಿ: ಸದ್ಯದಲ್ಲೇ ತೀರ್ಮಾನ- ಅಶ್ವತ್ಥನಾರಾಯಣ

ಚಾಮರಾಜನಗರ ಜಿಲ್ಲೆಗೆ ವಿವಿ: ಸದ್ಯದಲ್ಲೇ ತೀರ್ಮಾನ- ಅಶ್ವತ್ಥನಾರಾಯಣ

64
0
Decision for University at Chamarajanagar soon Karnataka Minister Ashwathnarayan

ಚಾಮರಾಜನಗರ:

ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಒಂದು ವಿಶ್ವವಿದ್ಯಾಲಯ ಬೇಕೆಂಬ ಬೇಡಿಕೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಸದ್ಯದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, `ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಅವರು ವಿವಿ ಸ್ಥಾಪನೆ ಬೇಡಿಕೆ ಸಂಬಂಧ ತಮ್ಮ ವರದಿ ಸಲ್ಲಿಸಿದ್ದಾರೆ. ಜತೆಗೆ, ಪ್ರತ್ಯೇಕ ವಿ.ವಿ.ಗಿಂತ ಈಗಿರುವ ಸ್ನಾತಕೋತ್ತರ ಕೇಂದ್ರವನ್ನೇ ಸದೃಢವಾಗಿ ಬೆಳೆಸಬೇಕೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಆದರೆ, ಒಂದು ಜಿಲ್ಲೆ ಎಂದಮೇಲೆ ಕನಿಷ್ಠ ಒಂದಾದರೂ ವಿವಿ ಇರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ’ ಎಂದರು.

ನೂತನ ಶಿಕ್ಷಣ ನೀತಿಯಲ್ಲಿ ಉದ್ಯಮಗಳಲ್ಲಿ ಬೇಡಿಕೆ ಇರುವ ಕೌಶಲ್ಯಗಳು, ತಂತ್ರಜ್ಞಾನ, ಗುಣಮಟ್ಟ ಮತ್ತು ಸಂಶೋಧನೆಗೆ ಸಾಕಷ್ಟು ಒತ್ತು ಕೊಡಲಾಗಿದೆ. ಜಾಗತಿಕ ಮಟ್ಟದ ಶಿಕ್ಷಣವನ್ನು ಕೊಡುವುದೇ ನಮ್ಮ ಗುರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸಾಕಷ್ಟು ಗಮನಾರ್ಹವಾಗಿ ಸುಧಾರಿಸಲಾಗಿದೆ ಎಂದು ಅವರು ಹೇಳಿದರು.

ಪದವಿ ಕಾಲೇಜು, ಸ್ನಾತಕೋತ್ತರ ಶಿಕ್ಷಣ, ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಶಿಕ್ಷಣ ಕ್ರಮಗಳನ್ನೆಲ್ಲ ವೈಜ್ಞಾನಿಕವಾಗಿ ಪರಿಷ್ಕರಿಸಲಾಗಿದ್ದು, ವಿಶ್ವ ದರ್ಜೆಯ ಪಠ್ಯಕ್ರಮ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಇದರ ಜತೆಗೆ ತರಬೇತಿ ಮತ್ತು ನಾವೀನ್ಯತೆಗೂ ಗಮನ ಹರಿಸಲಾಗಿದೆ. ಹೀಗಾಗಿ, ಉದ್ಯೋಗಕ್ಕೆ ಬೇಕಾದ ಅರ್ಹತೆ ಎಲ್ಲ ವಿದ್ಯಾರ್ಥಿಗಳಿಗೂ ಸಿಗುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಚಾಮರಾಜನಗರ ಜಿಲ್ಲೆಗೆ ಕಾನೂನು ಮಹಾವಿದ್ಯಾಲಯ ಬೇಕೆಂಬ ಬೇಡಿಕೆ ಇದೆ. ಆದರೆ, ಇದು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸ್ಥಳೀಯರ ಆಗ್ರಹವನ್ನು ಸಂಬಂಧಿಸಿದವರ ಗಮನಕ್ಕೆ ತಂದು, ಮಾತುಕತೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ವೇಳೆ ಅವರು ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅವರು, ಇಲ್ಲಿನ ಸರಕಾರಿ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ಸಿಗೂ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡರು.

ಇದಕ್ಕೂ ಮುನ್ನ ಸಚಿವರು ಮಲೆ ಮಹದೇಶ್ವರ ಬೆಟ್ಟ ಮತ್ತು ಸಾಲೂರು ಮಠಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಅಲ್ಲಿ ಮಹದೇಶ್ವರ ಸ್ವಾಮಿ ಬಳಸುತ್ತಿದ್ದ ಊರುಗೋಲು, ಶಂಖ ಮತ್ತೆಲ್ಲವನ್ನೂ ಸಚಿವರು ವೀಕ್ಷಿಸಿ, ಅವುಗಳ ನಿರ್ವಹಣೆಗೆ ಮೆಚ್ಚುಗೆ ಸೂಸಿದರು.

ಮೈಸೂರು ವಿವಿ ಕುಲಪತಿ ಪ್ರೊ ಹೇಮಂತ ಕುಮಾರ್ , ಪಿ.ಜಿ ಸೆಂಟರ್ ನಿರ್ದೇಶಕ ಮಹೇಶ, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

ಹಿಜಾಬ್ ವಿವಾದ- ಸ್ವಾತಂತ್ರ್ಯದ ದುರ್ಬಳಕೆ ಬೇಡ

ಹಿಜಾಬ್ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, `ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿರುವ ಕಡೆ ವಿದ್ಯಾರ್ಥಿಗಳು ಅದನ್ನೇ ಪಾಲಿಸಬೇಕು. ಪದವಿ ಕಾಲೇಜುಗಳಲ್ಲಿ ಸಮವಸ್ತ್ರವನ್ನೇನೂ ವಿಧಿಸಿಲ್ಲ. ಅಲ್ಲಿಗೆ ಹೋಗುವವರು ತಮ್ಮ ಇಷ್ಟದ ಉಡುಪನ್ನು ಹಾಕಿಕೊಂಡು ಹೋಗಬಹುದು. ನಮ್ಮ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯವಿದೆ. ಆದರೆ, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಅದಕ್ಕೆಲ್ಲ ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

`ಹಿಜಾಬ್ ವಿವಾದದ ಬಗ್ಗೆ ರಾಜ್ಯ ಹೈಕೋರ್ಟ್ ಈಗಾಗಲೇ ತನ್ನ ಮಧ್ಯಂತರ ನಿರ್ದೇಶನವನ್ನು ನೀಡಿದೆ. ಅದನ್ನು ಜಾರಿಗೊಳಿಸುವುದಷ್ಟೇ ಸರಕಾರದ ಹೊಣೆ. ಹಾಗೆಯೇ ವಿದ್ಯಾರ್ಥಿಗಳೂ ಸಹ ಶಿಕ್ಷಣದ ಕಡೆ ಗಮನ ಹರಿಸಬೇಕೇ ವಿನಾ ವಸ್ತ್ರದ ಬಗ್ಗೆಯಲ್ಲ. ಸಮವಸ್ತ್ರ ನೀತಿ 1995ರಿಂದಲೂ ಇದೆ. ಇದನ್ನೇನೂ ನಾವು ಮಾಡಿಲ್ಲ. ನಮ್ಮ ಸಮಾಜಕ್ಕೆ ಇದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ಇದೆ. ಇದೇ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ’ ಎಂದು ಅವರು ನುಡಿದರು.

LEAVE A REPLY

Please enter your comment!
Please enter your name here