ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಮತ್ತು ಬೆಳಗಾವಿ ನಡುವೆ ಎರಡೂ ಮಾರ್ಗಗಳಲ್ಲಿ ತಲಾ ಎರಡು ಟ್ರಿಪ್ ವಿಶೇಷ ರೈಲು ಓಡಿಸಲಿದೆ ಎಂದು ನವೆಂಬರ್ 5ರ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ಸಂಖ್ಯೆ 06551 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ನವೆಂಬರ್ 7 ಮತ್ತು 9ರಂದು ಸಂಜೆ 7 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 06552 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ನವೆಂಬರ್ 8 ಮತ್ತು 10ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಪ್ರತಿ ರೈಲಿನಲ್ಲಿ ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಮತ್ತು ಜನರಲ್ ಕ್ಲಾಸ್ ಬೋಗಿಗಳು, ದಿವ್ಯಾಂಗ ಸ್ನೇಹಿ ವಿಭಾಗವಿರುವ ಲಗೇಜ್-ಕಮ್-ಬ್ರೇಕ್ ವ್ಯಾನ್ ಹಾಗೂ ಜನರೇಟರ್-ಕಮ್-ಬ್ರೇಕ್ ವ್ಯಾನ್ ಸೇರಿ ಒಟ್ಟು 20 ಬೋಗಿಗಳಿರುತ್ತವೆ.
ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ, ದೀಪಾವಳಿ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ರೈಲು ಒದಗಿಸುವಂತೆ ನೈರುತ್ಯ ರೈಲ್ವೆಗೆ ಮನವಿ ಮಾಡಿದ್ದೆ, ಅದಕ್ಕೆ ಸ್ಪಂದಿಸಿ ರೈಲ್ವೆ ಈ ಸೇವೆಯನ್ನು ಏರ್ಪಡಿಸಿದೆ ಎಂದು ಹೇಳಿದ್ದಾರೆ. ಹಬ್ಬದ ಸಮಯದಲ್ಲಿ ಬೆಂಗಳೂರು–ಹುಬ್ಬಳ್ಳಿ–ಬೆಳಗಾವಿ ನಡುವೆ ಪ್ರಯಾಣಿಸುವವರಿಗೆ ಇದರಿಂದ ಅನುಕೂಲವಾಗಲಿದೆ.
