ದೇವಾಲಯಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ನಿಷೇಧಕ್ಕೆ ಆಗ್ರಹ; ಸಚಿವ ರಾಮಲಿಂಗ ರೆಡ್ಡಿಗೆ ಮನವಿ
ಬೆಂಗಳೂರು: ದೇವಸ್ಥಾನಗಳ ಪಾವಿತ್ರ್ಯ ಹಾಗೂ ಧಾರ್ಮಿಕ ಗೌರವ ಕಾಪಾಡುವ ಉದ್ದೇಶದಿಂದ ದೇವಸ್ಥಾನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಮತ್ತು ವಿಡಿಯೋ ಶೂಟಿಂಗ್ಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರ್ನಾಟಕ ಮಂದಿರ ಮಹಾಸಂಘವು ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿಯವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕದ ದೇವಸ್ಥಾನಗಳು ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕಗಳಾಗಿದ್ದು, ಭಕ್ತರ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರಗಳಾಗಿವೆ. ಇಂತಹ ಪವಿತ್ರ ಸ್ಥಳಗಳನ್ನು ವೈಯಕ್ತಿಕ ಪ್ರಚಾರ ಅಥವಾ ಮನರಂಜನಾ ಚಟುವಟಿಕೆಗಳಿಗೆ ಬಳಸುವುದು ಸರಿಯಲ್ಲ ಎಂದು ಸಂಘಟನೆ ಒತ್ತಿಹೇಳಿದೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಅಸಭ್ಯ ರೀತಿಯಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅರ್ಚಕರು ಮತ್ತು ಭಕ್ತರ ವಿರುದ್ಧ ಅವಾಚ್ಯ ಶಬ್ದ ಬಳಕೆ ನಡೆದಿರುವುದು ತೀವ್ರ ಖಂಡನೀಯವಾಗಿದೆ. ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಇಂತಹ ಘಟನೆಗಳು ರಾಜ್ಯದ ಹಲವೆಡೆ ಹೆಚ್ಚುತ್ತಿರುವುದಾಗಿ ಮಹಾಸಂಘ ಆತಂಕ ವ್ಯಕ್ತಪಡಿಸಿದೆ. ದೇವಸ್ಥಾನಗಳಲ್ಲಿ ಅನುಮತಿ ಇಲ್ಲದೆ ಅಸಭ್ಯ ಉಡುಪುಗಳಲ್ಲಿ ಶೂಟಿಂಗ್, ರೀಲ್ಸ್ ತಯಾರಿಕೆ ಮತ್ತು ಸಾಮಾಜಿಕ ಜಾಲತಾಣಗಳಿಗಾಗಿ ಪ್ರಚಾರಾತ್ಮಕ ಚಟುವಟಿಕೆಗಳು ನಡೆಯುತ್ತಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಹಾಗೂ ದೇವಸ್ಥಾನಗಳ ವಾಣಿಜ್ಯೀಕರಣಕ್ಕೂ ಕಾರಣವಾಗುತ್ತಿದೆ ಎಂದು ತಿಳಿಸಿದೆ.
ಸಂಘಟನೆ ಈ ಕೃತ್ಯಗಳು ಹಲವು ಕಾನೂನುಗಳ ಅಡಿಯಲ್ಲಿ ಗಂಭೀರ ಅಪರಾಧವಾಗುತ್ತವೆ ಎಂದು ಉಲ್ಲೇಖಿಸಿದೆ. ಭಾರತೀಯ ಸಂವಿಧಾನದ ಕಲಂ 25 ಮತ್ತು 26 ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂಸ್ಥೆಗಳ ನಿರ್ವಹಣೆಯ ಹಕ್ಕುಗಳನ್ನು ಒದಗಿಸುತ್ತವೆ. ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 298 (ಧಾರ್ಮಿಕ ಸ್ಥಳ ಅಪವಿತ್ರಗೊಳಿಸುವುದು), ಸೆಕ್ಷನ್ 299 (ಧಾರ್ಮಿಕ ಭಾವನೆಗೆ ಅವಮಾನ), ಸೆಕ್ಷನ್ 270 (ಸಾರ್ವಜನಿಕ ತೊಂದರೆ), ಹಾಗೂ ಸೆಕ್ಷನ್ 352 (ಉದ್ದೇಶಪೂರ್ವಕ ಅವಮಾನ) ಅನ್ವಯ ಇಂತಹ ಕೃತ್ಯಗಳು ದಂಡನೀಯವಾಗಿವೆ. ಜೊತೆಗೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಅಧಿನಿಯಮ, 1997 ಪ್ರಕಾರ ದೇವಸ್ಥಾನಗಳ ಶಿಸ್ತು ಮತ್ತು ಪಾವಿತ್ರ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಕರ್ನಾಟಕ ಮಂದಿರ ಮಹಾಸಂಘವು ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ದೇವಸ್ಥಾನಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್ಗಳಿಗೆ ಸಂಪೂರ್ಣ ನಿಷೇಧ, ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗೆ ಸ್ಪಷ್ಟ ಮಾರ್ಗಸೂಚಿ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ, ದೇವಸ್ಥಾನ ಆಡಳಿತ ಮತ್ತು ಭದ್ರತಾ ಸಿಬ್ಬಂದಿಗೆ ಅಧಿಕಾರ, ಪ್ರವೇಶ ದ್ವಾರಗಳಲ್ಲಿ ಸೂಚನಾ ಫಲಕ ಅಳವಡಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದುರುಪಯೋಗ ತಡೆಗೆ ಕ್ರಮ ಕೈಗೊಳ್ಳುವುದು ಸೇರಿವೆ.
ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಸಂಘಟಕರಾದ ಮೋಹನ್ ಗೌಡ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕರಾದ ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ನಿರ್ದೇಶಕರಾದ ಬಿ.ಎನ್. ಮಹೇಶ್ ಸೇರಿದಂತೆ ಶ್ರೀನಿವಾಸ್, ವಿಕ್ರಮ್ ಶೆಟ್ಟಿ, ಪುರುಷೋತ್ತಮ್ ಮತ್ತು ಇತರರು ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗ ರೆಡ್ಡಿ ಅವರು ಈ ವಿಷಯವನ್ನು ಶೀಘ್ರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
