ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಗಣ್ಯರು. ಚಿತ್ರ: ಸಿಎಂಒ ಕರ್ನಾಟಕ/ಎಕ್ಸ್
ಬೆಂಗಳೂರು: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಸಾಧ್ಯವಾದಷ್ಟು ಶೀಘ್ರ ನಡೆಯುವ ಚುನಾವಣೆಗಳಿಂದಲೇ ಜಾರಿಗೊಳಿಸಲು ಕಾನೂನಾತ್ಮಕವಾಗಿ ಸ್ಪಷ್ಟವಾದ, ನಿಗದಿತ ಕಾಲಮಿತಿಯ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಆಗ್ರಹಿಸಿದರು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ (ಸಿಡಬ್ಲ್ಯೂಪಿ) ಭಾರತ ವಲಯ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿದರು.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಸಾಂವಿಧಾನಿಕ ಭರವಸೆಗಳನ್ನು ಮೀರಿ ಆಡಳಿತ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆಯಾಗಿ ಪರಿವರ್ತನೆಯಾಗಬೇಕು ಎಂದು ಪರಮೇಶ್ವರ ಹೇಳಿದರು. “ನಮ್ಮ ಮುಂದಿರುವ ಪ್ರಶ್ನೆ ಮಹಿಳೆಯರು ನಾಯಕತ್ವಕ್ಕೆ ಸಮರ್ಥರೇ ಎಂಬುದಲ್ಲ; ಅದನ್ನು ಮಹಿಳೆಯರು ವಾದಕ್ಕೆ ಅತೀತವಾಗಿ ಸಾಬೀತುಪಡಿಸಿದ್ದಾರೆ. ಅಧಿಕಾರವನ್ನು ಮಹಿಳೆಯರೊಂದಿಗೆ ಹಂಚಿಕೊಳ್ಳುವಷ್ಟು ಧೈರ್ಯ ನಮ್ಮ ಸಂಸ್ಥೆಗಳಿಗೆ ಇದೆಯೇ ಎಂಬುದು ಪ್ರಶ್ನೆ” ಎಂದು ಅವರು ಹೇಳಿದರು.
ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಸುದೀರ್ಘ ಹೋರಾಟವನ್ನು ಸ್ಮರಿಸಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2008ರಲ್ಲಿ ಸಂವಿಧಾನ (108ನೇ ತಿದ್ದುಪಡಿ) ವಿಧೇಯಕ ಮಂಡಿಸಿತು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ 2010ರ ಮಾರ್ಚ್ 9ರಂದು ಅದು ರಾಜ್ಯಸಭೆಯಲ್ಲಿ 186 ಪರ ಮತ್ತು ಒಂದು ವಿರುದ್ಧ ಮತಗಳೊಂದಿಗೆ ಅಂಗೀಕಾರವಾಯಿತು ಎಂದರು. ರಾಹುಲ್ ಗಾಂಧಿ ಅವರು 2018ರ ಜುಲೈನಲ್ಲಿ ಮೋದಿ ಅವರಿಗೆ ಪತ್ರ ಬರೆದು ಬೇಷರತ್ ಬೆಂಬಲ ನೀಡುವುದಾಗಿ ತಿಳಿಸಿದ್ದರು ಮತ್ತು ಕ್ಷೇತ್ರ ಮರುವಿಂಗಡಣೆಯಿಂದಾಗುವ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ನ 2024ರ ಪ್ರಣಾಳಿಕೆ ಆಗ್ರಹಿಸಿತ್ತು ಎಂದೂ ನೆನಪಿಸಿದರು.
2023ರ 106ನೇ ಸಂವಿಧಾನ ತಿದ್ದುಪಡಿಯನ್ನು ಸ್ವಾಗತಿಸಿದ ಪರಮೇಶ್ವರ, ಭರವಸೆ ನೀಡಿದ ಮೀಸಲಾತಿ ಇನ್ನೂ ನಿಜವಾದ ಸ್ಥಾನಗಳಾಗಿ ಪರಿವರ್ತನೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ತಿದ್ದುಪಡಿ 2026ರ ಏಪ್ರಿಲ್‌ನಲ್ಲಿ ಔಪಚಾರಿಕವಾಗಿ ಜಾರಿಗೆ ಬಂದರೂ ಅನುಷ್ಠಾನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಣೆಯಾಗಿದೆ ಎಂದ ಅವರು, ಕ್ಷೇತ್ರ ಮರುವಿಂಗಡಣೆ ಮತ್ತು ಶಾಸಕಾಂಗ ಸ್ಥಾನಗಳ ವಿಸ್ತರಣೆ ಕುರಿತ ಮತ್ತೊಂದು ಸಂವಿಧಾನ ತಿದ್ದುಪಡಿಯನ್ನು 2026ರ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸುವ ಪ್ರಯತ್ನ ವಿಫಲವಾದುದನ್ನೂ ಉಲ್ಲೇಖಿಸಿದರು. ಮಹಿಳಾ ಪ್ರಾತಿನಿಧ್ಯವನ್ನು ಕ್ಷೇತ್ರಗಳ ವಿಶಾಲ ಹಾಗೂ ವಿವಾದಾತ್ಮಕ ಮರುವಿನ್ಯಾಸದೊಂದಿಗೆ ಜೋಡಿಸುವ ಕಷ್ಟವನ್ನು ಇವು ತೋರಿಸುತ್ತವೆ ಎಂದರು.
“ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಮನವಿ: ಸಾಧ್ಯವಾದಷ್ಟು ಶೀಘ್ರ ನಡೆಯುವ ಚುನಾವಣೆಗಳಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಸ್ಥಾನ ನೀಡಲು ಸ್ಪಷ್ಟ, ಕಾನೂನುಬದ್ಧ ಮತ್ತು ಕಾಲಮಿತಿಯ ಮಾರ್ಗಕ್ಕೆ ದೇಶ ಒಪ್ಪಿಗೆ ನೀಡಲಿ” ಎಂದು ಅವರು ಹೇಳಿದರು; ಮಹಿಳಾ ಮೀಸಲಾತಿ ಜಾರಿಯನ್ನು ಕ್ಷೇತ್ರ ಮರುವಿಂಗಡಣೆಯ ವಿವಾದಗಳಿಂದ ಪ್ರತ್ಯೇಕಿಸಬಲ್ಲ ಅಗತ್ಯ ಸಂವಿಧಾನ ಬದಲಾವಣೆಗಳನ್ನು ಸಂಸತ್ತು ಒಮ್ಮತದಿಂದ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಮಹಿಳಾ ಶಾಸಕರಿಗೆ ಸೈಬರ್ ಸುರಕ್ಷತೆ, ಸಾಂಸ್ಥಿಕ ಬೆಂಬಲ ಮತ್ತು ಮಾರ್ಗದರ್ಶನ ವ್ಯವಸ್ಥೆ ಬಲಪಡಿಸಲು ಅವರು ಕರೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಇದಕ್ಕೂ ಮುನ್ನ ಸಮ್ಮೇಳನವನ್ನು ಉದ್ಘಾಟಿಸಿದ್ದರು.
