ಬೆಂಗಳೂರು:
ತೋಟಗಾರಿಕೆ ಉತ್ಪನ್ನಗಳ ದರ ತೀವ್ರ ಕುಸಿತದ ಹಿನ್ನೆಲೆಯಲ್ಲಿ ರೈತರ ರಕ್ಷಣೆಗೆ ಮುಂದಾಗಬೇಕೆಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಬೆಲೆಗಳ ತೀವ್ರ ಕುಸಿತ ಮತ್ತು ಲಾಕ್‌ಡೌನ್‌ನಿಂದಾಗಿ ಖರೀದಿದಾರರು ಇಲ್ಲವಾಗಿದ್ದಾರೆ. ಸಾರಿಗೆ ವೆಚ್ಚವನ್ನು ಸಹ ಪಡೆಯಲಾಗದ ಕಾರಣ ರೈತರು ಉತ್ಪನ್ನಗಳನ್ನು ಬೀದಿಗೆ ಎಸೆಯುವಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ತೋಟಗಾರಿಕೆ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಮೋದಿಯವರಿಗೆ ಬರೆದ ಪತ್ರದಲ್ಲಿ ದೇವೇಗೌಡ ಒತ್ತಾಯಿಸಿದ್ದಾರೆ.


ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ರೈತರನ್ನು ಕಾಪಾಡುವ ನಿಟ್ಟಿನಲ್ಲಿ ತರಕಾರಿ ಮತ್ತು ಇತರ ತೋಟಗಾರಿಕೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆಯೂ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಕೋವಿಡ್ -19 ಎರಡನೇ ಅಲೆಯು ಗ್ರಾಮೀಣ ಪ್ರದೇಶದತ್ತ ವ್ಯಾಪಿಸುತ್ತಿರುವುದು ಮತ್ತು ತೋಟಗಾರಿಕಾ ಉತ್ಪನ್ನಗಳ ದರಗಳು ತೀವ್ರ ಕುಸಿತವಾಗುತ್ತಿರುವುದು ಗ್ರಾಮೀಣ ಜನರ ಜೀವನಕ್ಕೆ ದೊಡ್ಡ ಹೊಡೆತವಾಗಿದೆ ಎಂದು ದೇವೇಗೌಡ ಹೇಳಿದ್ದಾರೆ.