ಬೆಂಗಳೂರು:
ಡಿಸಿಎಂ ಮತ್ತು ಕೃಷಿ ಸಚಿವರ ರಾಜೀನಾಮೆ ಪಡೆದು 2 ಲಂಚದ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳಾದ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವೆರಡು ಬೇಡಿಕೆಗಳಲ್ಲಿ ಹೊಂದಾಣಿಕೆ ಇಲ್ಲ. ಇದಕ್ಕಾಗಿ ಬಿಜೆಪಿ ಹೋರಾಟ ಮಾಡಲಿದೆÉ ಎಂದು ಅವರು ತಿಳಿಸಿದರು.
ಡಿಸಿಎಂ ಅವರು ಬಿಲ್ ಪಾವತಿ ತಡೆಹಿಡಿದು ಇಡೀ ಯೋಜನೆಯ 6 ಸಾವಿರ ಕೋಟಿ ದುಡ್ಡಿನ ಮೇಲೆ ಈಗಲೇ ಕಮಿಷನ್ ಕೊಡಲು ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೇ ಹೇಳಿದ್ದಾರೆ ಎಂದು ಟೀಕಿಸಿದರು. ಕೆಲಸ ಆರಂಭವಾಗದೆ ಇದ್ದರೆ ಅದನ್ನು ಆರಂಭಿಸಲು ಶೇ 10 ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಇದೆ ಎಂದರು.
ರೈತವಿರೋಧಿ, ಬೆಂಗಳೂರು ವಿರೋಧಿ ಸರಕಾರ ನಿಮ್ಮದು. ಗುತ್ತಿಗೆದಾರರಿಗೆ ಹಿಂಸೆ ನೀಡುವ ಉದ್ದೇಶ ಇವರದು. ನ್ಯಾಯ, ನೀತಿ, ಧರ್ಮ ಒಂದು ಸಣ್ಣ ಕಣದಲ್ಲೂ ಇಲ್ಲ.
ಬೆಂಗಳೂರಿನಲ್ಲಿ ಯಾವುದೇ ಪ್ಲಾನ್‍ಗೆ ಒಪ್ಪಿಗೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಉಪ ಮುಖ್ಯಮಂತ್ರಿಗಳ ಮೇಲಿನ ಆಪಾದನೆ ಮೇಲೆ ಲೋಕಾಯುಕ್ತ ತನಿಖೆಗೆ ಮುಖ್ಯಮಂತ್ರಿಗಳು ಸೂಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಎರಡೂವರೆ ತಿಂಗಳಲ್ಲೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೊಲೆ, ಸುಲಿಗೆ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದ ಅವರು, ಭರವಸೆ, ವಿಶ್ವಾಸ ಮೂಡಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಬಗ್ಗೆ ಜನತೆ ಸಂಪೂರ್ಣವಾಗಿ ನಿರಾಶರಾಗಿದ್ದಾರೆ. ಸ್ವಚ್ಛ, ಭ್ರಷ್ಟಾಚಾರರಹಿತ ಆಡಳಿತದ ಭರವಸೆ ಕೊಟ್ಟಿದ್ದರು. ಸಿಎಂ ಜೊತೆ ಹಲವಾರು ಸಿಎಂಗಳು, ಶ್ಯಾಡೋ ಸಿಎಂಗಳಿದ್ದು, ಎಟಿಎಂ ಸರಕಾರವೆಂದು ಪ್ರಖ್ಯಾತಿ ಪಡೆದಿದೆ ಎಂದು ಟೀಕಿಸಿದರು.
ಅಸೆಂಬ್ಲಿ ಚುನಾವಣೆ ಖರ್ಚು ರಿಕವರಿ, ಲೋಕಸಭಾ ಚುನಾವಣೆಗೂ ಸಂಗ್ರಹಕ್ಕೆ ವ್ಯಾಕ್ಯೂಂ ಮೆಷಿನ್ ಹಾಕಿ ಹೀರುವ ಪ್ರವೃತ್ತಿ ಮುಂದುವರಿದ ಆರೋಪಗಳಿವೆ. ಟಾರ್ಗೆಟ್, ಟಾರ್ಗೆಟ್ ಹೆಚ್ಚಿದೆ. ಸಭೆ ನಡೆಯುವುದೇ ಇನ್‍ಕಂ ಬಗ್ಗೆ ಚರ್ಚಿಸಲು ಎಂಬಂತಾಗಿದೆ ಎಂದು ಆಕ್ಷೇಪಿಸಿದರು.
ಜನರಿಗೆ ಭಾಗ್ಯ ಕೊಡಲು ಭ್ರಷ್ಟಾಚಾರ, ಪಡೆಯಲೂ ಭ್ರಷ್ಟಾಚಾರ ಎಂಬಂತಾಗಿದೆ. ನೂರಾರು ಕಂಡಿಷನ್ ಜೊತೆ ಗ್ಯಾರಂಟಿ ಅನುಷ್ಠಾನ ಆಗುತ್ತಿದೆ. ವೈಎಸ್‍ಟಿ, ವಿಎಸ್‍ಟಿ ಮಾದರಿಯಲ್ಲಿ ಹಣ ಸಂಗ್ರಹ ನಡೆದಿದೆ. ಐಎಎಸ್ ಅಧಿಕಾರಿಗಳನ್ನು ಮಹಾ ಘಟಬಂಧನ್ ಸ್ವಾಗತಕ್ಕೆ ಗುಮಾಸ್ತರಂತೆ ಕಾರ್ಯ ನಿರ್ವಹಿಸಲು ನೇಮಿಸಲಾಗಿತ್ತು ಎಂದು ನುಡಿದರು.
ಪ್ರಜಾಪ್ರಭುತ್ವ ಧ್ವನಿ ದಮನ ಮಾಡುವ ಕೆಲಸ ನಡೆದಿದೆ. ಜನಾಶೀರ್ವಾದದ ಸಂಪೂರ್ಣ ದುರ್ಬಳಕೆ ಮಾಡುತ್ತಿದ್ದಾರೆ. ಸುರ್ಜೇವಾಲಾ ಟಾರ್ಗೆಟ್ ಕಲೆಕ್ಷನ್ ಆಪಾದನೆಗಳಿವೆ. ಎಟಿಎಂ ಸರಕಾರದ ಆರೋಪವಿದೆ ಎಂದು ಅವರು ನುಡಿದರು.
ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿಗಳ ಮೇಲೆ ಗುತ್ತಿಗೆದಾರರು ಶೇ 10ರಿಂದ 15 ಕಮಿಷನ್ ಆರೋಪ ಮಾಡಿದ್ದಾರೆ. ಆಗ ನಿರಾಧಾರವಾಗಿ ಕ್ಯಾಂಪೇನ್ ಮಾಡಿದ್ದರು. ಈಗ ಏನು ಉತ್ತರ ನೀಡುತ್ತೀರಿ. ಡಿ.ಕೆ.ಶಿವಕುಮಾರ್ ಟ್ರ್ಯಾಕ್ ರೆಕಾರ್ಡ್ ಎಲ್ಲವನ್ನೂ ಹೇಳುತ್ತದೆ. ಇವರು ಇನ್ನೊಬ್ಬರ ಬಗ್ಗೆ, ಗುತ್ತಿಗೆದಾರರ ಕುರಿತು ಮಾತನಾಡುತ್ತಾರೆ. ಹಾಗಿದ್ದರೆ ಬಿಬಿಎಂಪಿಯಲ್ಲಿ ವ್ಯವಸ್ಥೆ ಇಲ್ಲವೇ? ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಯಾಕೆ ಹೀಗೆ ಮಾತನಾಡುತ್ತಾರೆ ಎಂದು ಕೇಳಿದರು.
ಬಿಲ್ ಅಪ್ರೂವ್ ಮಾಡಲು ಸಚಿವರು ಹೊರಟದ್ದು ಇದೇ ಮೊದಲಲ್ಲವೇ? ಬಿಲ್ ಪಾವತಿ ನಿರ್ಬಂಧ ಮಾಡಿದ್ದು ಎಲ್ಲಾದರೂ ಕೇಳಿದ್ದೀರಾ? ವ್ಯವಸ್ಥೆಯ ವಿಶ್ವಾಸಾರ್ಹತೆ ಏನು? ಎಂದರು. ಹಣ ಕಲೆಕ್ಷನ್‍ಗಾಗಿ ಈ ಉದ್ದೇಶವಿತ್ತು ಎಂಬ ಆರೋಪ ಕೇಳಿಸುತ್ತಿದೆ ಎಂದು ಅವರು ಟೀಕಿಸಿದರು.
ಇಂಥ ಟ್ಯಾಲೆಂಟ್ ಇರುವ ವ್ಯಕ್ತಿ ಇದ್ದಾರೆ. ಕಾನೂನು ಪಾಲನೆ ಆಗುತ್ತಿಲ್ಲ. 5ರಂದು ತಜ್ಞರ ವರದಿ ಸಮಿತಿ ಮಾಡಿದ್ದಾರೆ. 1ರಂದು 26 ಪಾಯಿಂಟ್ ಉಳ್ಳ ಶಿವಕುಮಾರ್ ಅವರ ಟಿಪ್ಪಣಿ ಬಿಡುಗಡೆ ಆಗಿದೆ. ಹಣಕಾಸು ಇಲಾಖೆ ಸರ್ಕುಲರ್ ಇವರಿಗೆ ಅನ್ವಯ ಆಗುತ್ತಿಲ್ಲ ಎಂದು ಟೀಕಿಸಿದರು. ಎಲ್ಲ ರಾಜಕಾರಣಿಗಳೂ ಶಿವಕುಮಾರ್ ಅವರಂತೆ ಎನ್ನಲು ಸಾಧ್ಯವೇ? ಶಿವಕುಮಾರ್ ಶಿವಕುಮಾರ್ ಆಗುತ್ತಾರೆ. ಅಶ್ವತ್ಥನಾರಾಯಣ್ ಶಿವಕುಮಾರ್ ಅಲ್ಲ ಎಂದು ತಿಳಿಸಿದರು.
ಗುತ್ತಿಗೆದಾರರು ಈಗಲೇ ಸುಸ್ತಾಗಿದ್ದಾರೆ. ಗುತ್ತಿಗೆದಾರರ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ಕೊಡಬೇಕು. ನಾವು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತೇವೆ. ಪ್ರಾಮಾಣಿಕತೆ ಕಿಂಚಿತ್ತಾದರೂ ಇದ್ದರೆ ಲೋಕಾಯುಕ್ತಕ್ಕೆ ತನಿಖೆಗೆ ವಹಿಸಿ.
ಚಲುವರಾಯಸ್ವಾಮಿ ಅವರ ಮೇಲಿನ ಲಂಚ ಕೇಳಿದ ಆಪಾದನೆ ಆಧರಿತವಾಗಿ ರಾಜ್ಯಪಾಲರು ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿದ್ದಾರೆ. ಅಧಿಕಾರಿಗಳ ಮೂಲಕ ಹಣ ಸಂಗ್ರಹ ನಡೆದಿದೆ. ಪೇ ಸಿಎಂ, ಪೇ ಡಿಸಿಎಂ, ಪೇ ಚಲುವರಾಯಸ್ವಾಮಿ ಆಗಿದೆ. ಪೇ ಪೇ ಆಗಿದೆ.
ಸಿಎಂ ಇದನ್ನು ನಕಲಿ ಎಂದಿದ್ದಾರೆ. ಇವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸಿಐಡಿಗೆ ತನಿಖೆ ವಹಿಸಿದರೆ ನ್ಯಾಯ ಸಿಗುವುದೇ? ಇವರಿಬ್ಬರನ್ನು ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಿ ಎಂದು ಆಗ್ರಹಿಸಿದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ಬಗ್ಗೆ ತನಿಖೆಯನ್ನು ಯಾರಿಂದಲಾದರೂ ಮಾಡಿಸಲಿ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಂ ಕಂ ವೆಲ್‍ಕಂ ಎಂದು ತಿಳಿಸಿದರು. ಬಹಳ ಸತ್ಯವಂತ, ಪ್ರಾಮಾಣಿಕ ಎನ್ನುವ ಸಿದ್ದರಾಮಯ್ಯನವರು ಲೋಕಾಯುಕ್ತದ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಮಾಜಿ ಸಚಿವರಾದ ಕೆ ಗೋಪಾಲಯ್ಯ, ಬಿಡಿಎ ಮಾಜಿ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.