ಬೆಂಗಳೂರು:
ನಾನು ಯಾರ ಬಳಿಯಾದರು ಕಮಿಷನ್ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ನಾನು ಕೇಳಿಲ್ಲವಾದರೆ ಬೊಮ್ಮಾಯಿ, ಅಶೋಕ್ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ? ನಾನು ಅವರ ಸ್ಥಾನ ಹಾಗೂ ಹಿರಿತನಕ್ಕೆ ಗೌರವ ನೀಡಬೇಕು ನೀಡುತ್ತೇನೆ. ಅಶೋಕ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ ಎಂದರು.
ತನಿಖೆ ಒಂದೆರಡು ಕಡೆ ಮಾತ್ರ ಮಾಡುವುದಿಲ್ಲ. ಎಲ್ಲ ಕಡೆ ಮಾಡಲಾಗುತ್ತದೆ. ಕೆಲಸ ಮಾಡಿದ್ದರೆ ಬಿಲ್ ಪಾವತಿ ಆಗಲಿದೆ. ಈಗ ಒಂದೆರಡು ತಿಂಗಳು ಕಾಯಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.
“ಗುತ್ತಿಗೆದಾರರು ನೇಣು ಹಾಕಿಕೊಳ್ಳುವುದು ಬೇಡ, ದಯಾ ಮರಣ ಕೇಳುವುದೂ ಬೇಡ. ಅವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಆರೋಪ ಪ್ರತ್ಯಾರೋಪ ಸಹಜ. ಗುತ್ತಿಗೆದಾರರು ರಾಜ್ಯಪಾಲರು, ಅಶೋಕ್, ಕುಮಾರಸ್ವಾಮಿ ಎಲ್ಲರನ್ನೂ ಕೇಳುತ್ತಿದ್ದಾರೆ. ನಾನು ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದೇನೆ,” ಎಂದು ಶಿವಕುಮಾರ್ ಹೇಳಿದರು.
ಕಮಿಷನ್ ವಿಚಾರದಲ್ಲಿ ಶಾಂಗ್ರಿಲಾ ಹೋಟೆಲ್ ನಲ್ಲಿ ಮೀಟಿಂಗ್ ಮಾಡಿದ್ದು, ನಿಮ್ಮ ಪರವಾಗಿ ಅಧಿಕಾರಿಯೊಬ್ಬರು ಬಂದು ಕಮಿಷನ್ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರಲ್ಲ ಎಂದು ಗಮನ ಸೆಳೆದಾಗ, “ಕೆಂಪಣ್ಣ ಅವರು ಗೌರವಯುತ ವ್ಯಕ್ತಿ. ನೀವು ಹೇಳಿದಕ್ಕೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅವರಿಗೆ ಯಾವ ಅಧಿಕಾರಿ ಕೇಳಿದ್ದಾರೋ ಆ ಬಗ್ಗೆ ಒಂದು ಅಫಿಡವಿಟ್ ಹಾಗೂ ದೂರು ಸಲ್ಲಿಸಲು ಹೇಳಿ” ಎಂದು ತಿಳಿಸಿದರು.
ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡೋಕೆ ಆಗಲ್ಲ
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನೀವು ಅಜ್ಜಯ್ಯನ ಮೇಲೆ ಆಣೆ ಪ್ರಮಾಣ ಮಾಡುವಂತೆ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, “ರಸ್ತೆಯಲ್ಲಿ ಹೋಗುವ ಯಾರದೋ ಮಾತಿಗೆಲ್ಲ ನಾನು ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮಾತನಾಡಲಿ, ಉತ್ತರ ನೀಡುತ್ತೇನೆ. ಯಾರಿಗೆ ಏನು ಉತ್ತರ ನೀಡಬೇಕೊ ನೀಡುತ್ತೇನೆ” ಎಂದು ತಿಳಿಸಿದರು.