ಇನ್ನು ಮುಂದೆ ಗೃಹ ಕಚೇರಿ ‘ಕೃಷ್ಣಾ’ದಲ್ಲೇ ಭೇಟಿ; ಸದಾಶಿವನಗರ ನಿವಾಸಕ್ಕೆ ಬರದಂತೆ ಮನವಿ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, ಜೂನ್ 22: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನು ಮುಂದೆ ಸಾರ್ವಜನಿಕರು, ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ತಮ್ಮ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ ದಲ್ಲೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ, ಅನಿವಾರ್ಯ ಕಾರಣಗಳಿಂದ ಇನ್ನು ಮುಂದೆ ಸದಾಶಿವನಗರದಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಲು ಸಾರ್ವಜನಿಕರು, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಯಾವುದೇ ತೊಂದರೆ ತೆಗೆದುಕೊಳ್ಳಬಾರದು ಹಾಗೂ ಇದನ್ನು ಅನ್ಯಥಾ ಭಾವಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಯಸುವವರು ಇನ್ನು ಮುಂದೆ ಗೃಹ ಕಚೇರಿ ‘ಕೃಷ್ಣಾ’ ಕ್ಕೆ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.