ಬೆಂಗಳೂರು, ಜೂನ್ 19: ಬೆಂಗಳೂರಿನ ವರ್ತೂರು ಸಮೀಪದ ಬೆಳಗೆರೆಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ಟಿಪಿ)ದಲ್ಲಿ ಸಂಭವಿಸಿದ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ. ಮೃತ ಕಾರ್ಮಿಕರ ಶವಗಳ ಪತ್ತೆಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಸಹಾಯದೊಂದಿಗೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಗುರುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ವರ್ತೂರಿನ ಬೆಳಗೆರೆಯಲ್ಲಿರುವ 90 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿಯ 40 ಅಡಿ ಆಳದ Sewage Pumping Wet Well ಗೆ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದಿದ್ದರು.
ದುರ್ಘಟನೆಯಲ್ಲಿ ಬ್ರಿಜೇಶ್ ಹಾಗೂ ಅಖಿಲೇಶ್ ಮೃತಪಟ್ಟಿದ್ದು, ವಿನೋತ್ ಡಿ.ಎಸ್. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜಲಮಂಡಳಿ ಅಧ್ಯಕ್ಷರಾದ ಡಾ. ಮಂಜುಳಾ ಐಎಎಸ್ ಅವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು. ಜಲಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಷಾನಿಲದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿ
ಅಧಿಕಾರಿಗಳ ಪ್ರಕಾರ, ಟ್ಯಾಂಕ್ನೊಳಗೆ ವಿಷಾನಿಲ ತುಂಬಿಕೊಂಡಿರುವುದು ಹಾಗೂ ನೀರಿನ ಹರಿವಿನ ರಭಸ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಜೊತೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ.
ಟ್ಯಾಂಕ್ ಒಳಗೆ ಕಾರ್ಯಾಚರಣೆ ನಡೆಸುವ ಮೊದಲು, ವಿಷಾನಿಲದ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಒಳ ಪ್ರವೇಶಿಸಲು ಟ್ಯಾಂಕ್ಗೆ ಆಮ್ಲಜನಕವನ್ನು ತುಂಬುವ ಕಾರ್ಯ ನಡೆಯುತ್ತಿದೆ. ಪರಿಸ್ಥಿತಿ ಸುರಕ್ಷಿತವಾದ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿ ಟ್ಯಾಂಕ್ ಒಳಗೆ ಇಳಿದು ಶೋಧ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಸಮಗ್ರ ತನಿಖೆಗೆ ಆದೇಶ
ಘಟನೆ ಕುರಿತು ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ ಅವರು ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ.
ಅಪಘಾತಕ್ಕೆ ಕಾರಣವಾದ ನಿರ್ಲಕ್ಷ್ಯ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜಲಮಂಡಳಿಯು ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಹಾಗೂ ವೈದ್ಯಕೀಯ ನೆರವನ್ನು ಒದಗಿಸುತ್ತಿದ್ದು, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸುವುದಾಗಿ ತಿಳಿಸಿದೆ.
ಈ ಘಟನೆ ನಗರ ಪ್ರದೇಶಗಳಲ್ಲಿನ ಒಳಚರಂಡಿ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
