ರಾಮನಗರ:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರಚಂಡ ಜಯಭೇರಿ ಬಾರಿಸುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ರೋಡ್ ಶೋ ನಡೆಸುವ ಮೂಲಕ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಗೆಲುವನ್ನು ಜನ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಗೆಲುವಲ್ಲ ಬದಲಾಗಿ ಕನ್ನಡಿಗರ ಗೆಲುವು. ಅವರ ಭರವಸೆಗಳ ಗೆಲುವು, ಒಳ್ಳೆಯ ನಾಳೆಗಳ ಗೆಲುವು. #KarnatakaElectionResults2023 pic.twitter.com/fuLu7T5uQZ
— DK Shivakumar (@DKShivakumar) May 13, 2023
ನಂತರ, ಚುನಾವಣಾಧಿಕಾರಿಗಳಿಂದ ಚುನಾವಣೆಯಲ್ಲಿ ಗೆದ್ದ ಪ್ರಮಾಣ ಪತ್ರವನ್ನು ಡಿಕೆ ಶಿವಕುಮಾರ್ ಪಡೆದರು. ಸಂಸದ ಡಿ.ಕೆ. ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನಾ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿ ನಮಗೆ ದೇಗುಲವಿದ್ದಂತೆ. ನಮ್ಮ ಮುಂದಿನ ನಡೆ ಕುರಿತು ಪಕ್ಷದ ಕಚೇರಿಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಪಕ್ಷದ ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರು, ಸಿದ್ದರಾಮಯ್ಯ ಸೇರಿ ಎಲ್ಲಾ ನಾಯಕರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಹೇಳಿದರು.