‘ದಿ ರಿಯಲ್ ಪ್ರಜಾಕೀಯ’ ಅನಾವರಣ ಮಾಡಿದ ಉಪೇಂದ್ರ: “ನಾನು ಫಾಲೋವರ್ ಅಲ್ಲ, ನಾನು ಲೀಡರ್” – ಮತದಾರರ ಕೈಗೆ ಅಧಿಕಾರ ನೀಡುವ ಹೊಸ ರಾಜಕೀಯ ಮಾದರಿ
ಬೆಂಗಳೂರು: ನಟ ಹಾಗೂ ರಾಜಕೀಯ ಚಿಂತಕ ಉಪೇಂದ್ರ ಅವರು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ದಿ ರಿಯಲ್ ಪ್ರಜಾಕೀಯ’ ಎಂಬ ಹೊಸ ರಾಜಕೀಯ ಮಾದರಿಯನ್ನು ಅನಾವರಣಗೊಳಿಸಿದ್ದು, ಮತದಾರರೇ ರಾಜಕೀಯದ ಕೇಂದ್ರಬಿಂದುವಾಗಬೇಕು ಎಂಬ ಸಂದೇಶವನ್ನು ನೀಡಿದರು.
ಈ ಹೊಸ ಪ್ರಜಾಕೀಯದ ಕುರಿತು ಮಾತನಾಡಿದ ಅವರು, ಇದುವರೆಗೆ ನಡೆದ ಪ್ರಯತ್ನಗಳ ಮುಂದುವರಿದ ಮತ್ತು ಪ್ರಾಯೋಗಿಕ ರೂಪವೇ ‘ದಿ ರಿಯಲ್ ಪ್ರಜಾಕೀಯ’ ಎಂದು ಸ್ಪಷ್ಟಪಡಿಸಿದರು. “ಇದಕ್ಕೂ ಮುಂಚೆ ಇದ್ದ ಪ್ರಜಾಕೀಯ ರಿಯಲ್ ಅಲ್ಲ ಅನ್ನೋದಿಲ್ಲ, ಆದರೆ ಈಗ ನಾವು ಇನ್ನಷ್ಟು ಪಾರದರ್ಶಕ, ಜನಕೇಂದ್ರಿತ ವ್ಯವಸ್ಥೆ ತರ್ತಿದ್ದೀವಿ” ಎಂದು ಹೇಳಿದರು.
ತಮ್ಮ ರಾಜಕೀಯ ಪ್ರಯಾಣವನ್ನು ವಿವರಿಸಿದ ಉಪೇಂದ್ರ, ಆರಂಭದಲ್ಲಿ ಬೇರೆ ಪಕ್ಷಗಳ ಜೊತೆ ಕೆಲಸ ಮಾಡಲು ಯತ್ನಿಸಿದರೂ, ತಮ್ಮ ತತ್ವಗಳನ್ನು ಸಂಪೂರ್ಣವಾಗಿ ಸ್ವೀಕರಿಸದ ಕಾರಣ ದೂರವಾದರು ಎಂದು ಹೇಳಿದರು. ಬಳಿಕ ತಮ್ಮದೇ ಪಕ್ಷ ಸ್ಥಾಪಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಂಟರ್ವ್ಯೂ ಮತ್ತು ಮ್ಯಾನಿಫೆಸ್ಟೋ ಆಧಾರಿತ ವಿಧಾನಗಳನ್ನು ಪ್ರಯೋಗಿಸಿದರು. ಆದರೆ ಅಭ್ಯರ್ಥಿಗಳು ಹೇಳುವುದು ಒಂದು, ಜನರಿಗೆ ಬೇಕಾಗಿರುವುದು ಇನ್ನೊಂದು ಎಂಬ ವ್ಯತ್ಯಾಸ ಅವರಿಗೆ ಸ್ಪಷ್ಟವಾಯಿತು ಎಂದರು.
ನಂತರ ಸಾರ್ವಜನಿಕರಿಂದ ನೇರವಾಗಿ ಸೈನ್ ಸಂಗ್ರಹಿಸುವ ವ್ಯವಸ್ಥೆ ತಂದರೂ, ಅದರಲ್ಲಿ ನಿಖರತೆ ಮತ್ತು ದೃಢೀಕರಣ ಸಮಸ್ಯೆಗಳು ಎದುರಾದವು. ಈ ಎಲ್ಲಾ ಅನುಭವಗಳ ಹಿನ್ನೆಲೆ, ಇದೀಗ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.
ಈ ಹೊಸ ಮಾದರಿಯಲ್ಲಿ, ನಾಗರಿಕರು ತಮ್ಮ ಇಮೇಲ್ ಐಡಿ ಬಳಸಿ ಲಾಗಿನ್ ಆಗಿ ತಮ್ಮ ವಾರ್ಡ್, ಹಳ್ಳಿ, ಪಟ್ಟಣ ಅಥವಾ ಕ್ಷೇತ್ರ ಆಯ್ಕೆ ಮಾಡಿಕೊಂಡು, ಉದ್ಯೋಗ, ಆರೋಗ್ಯ, ಶಿಕ್ಷಣ, ರಸ್ತೆ, ನೀರು ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ದಾಖಲಿಸಬಹುದು. ನಂತರ ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳೊಂದಿಗೆ ವಿಡಿಯೋ ಕಾಲ್, ಸಾಮಾಜಿಕ ಜಾಲತಾಣ, ನೇರ ಭೇಟಿಗಳ ಮೂಲಕ ಸಂಪರ್ಕ ಸಾಧಿಸಬಹುದು.
ಸ್ವತಂತ್ರರಿಗೆ ಮಾತ್ರ ….
— Upendra (@nimmaupendra) April 1, 2026
Only For independents…..https://t.co/7nb75Dlvt4
( ಆಂಡ್ರಾಯ್ಡ್ ಮತ್ತು ಐಫೋನ್ ಆಪ್ ಸದ್ಯದಲ್ಲೇ ನಿರೀಕ್ಷಿಸಿ …..
In Android and iPhone app soon…)
“ನಾನು ಫಾಲೋವರ್ ಅಲ್ಲ, ನಾನು ಲೀಡರ್” ಎಂಬ ತತ್ವವನ್ನು ಈ ವ್ಯವಸ್ಥೆಯ ಮೂಲ ತತ್ವವಾಗಿ ಉಪೇಂದ್ರ ವಿವರಿಸಿದರು. ಯಾವುದೇ ನಾಯಕನ ಮೇಲೆ ಅವಲಂಬನೆ ಇಡುವ ಮನೋಭಾವಕ್ಕೂ, ಎಲ್ಲವನ್ನೂ ನಾಯಕನೇ ಸರಿಪಡಿಸುತ್ತಾನೆ ಎನ್ನುವ ಭ್ರಮೆಗೂ ಇಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.
ಅಭ್ಯರ್ಥಿಗಳು ಈ ವ್ಯವಸ್ಥೆಗೆ ಪ್ರವೇಶಿಸಲು, “ನನ್ನನ್ನು ಆಯ್ಕೆ ಮಾಡಿದವರು ನನ್ನ ಮಾಲೀಕರು” ಎಂದು ಘೋಷಿಸಿ, ಜನರ ಮಾತಿನಂತೆ ಕೆಲಸ ಮಾಡುವುದಾಗಿ ಒಪ್ಪಿಕೊಳ್ಳಬೇಕು. ಅವರು ತಮ್ಮ ಮಾಹಿತಿ, ಸಂಪರ್ಕ ವಿವರಗಳು, ಸಾಮಾಜಿಕ ಜಾಲತಾಣ ಲಿಂಕ್ಗಳು ಮತ್ತು ಜನರೊಂದಿಗೆ ಸಂವಹನದ ಸಮಯವನ್ನು ಪ್ರಕಟಿಸಬೇಕು.
ಮತದಾರರು ಅಭ್ಯರ್ಥಿಗಳನ್ನು ಪಾರದರ್ಶಕ ರೇಟಿಂಗ್ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡಬಹುದು. ‘ಬ್ಯಾಡ್’, ‘ಅವರೆಜ್’, ‘ಗುಡ್’, ‘ವೆರಿ ಗುಡ್’, ‘ಎಕ್ಸಲೆಂಟ್’ ಎಂಬ ರೀತಿಯಲ್ಲಿ ರೇಟಿಂಗ್ ನೀಡಿ, ಹೆಚ್ಚು ರೇಟಿಂಗ್ ಪಡೆದ ಅಭ್ಯರ್ಥಿಯನ್ನು ಮುಂದೆ ತರಬಹುದು. ಕಡಿಮೆ ರೇಟಿಂಗ್ ಪಡೆದವರು ಸ್ವಯಂ ಹಿಂದೆ ಸರಿಯುವ ಸಂಸ್ಕೃತಿ ಬೆಳೆಬೇಕು ಎಂದು ಉಪೇಂದ್ರ ಅಭಿಪ್ರಾಯಪಟ್ಟರು.
ಚುನಾವಣೆಯ ನಂತರವೂ ಜನರ ಮೇಲ್ವಿಚಾರಣೆ ಮುಂದುವರಿಯುತ್ತದೆ ಎಂದು ಹೇಳಿದ ಅವರು, ಆಯ್ಕೆಯಾದ ಪ್ರತಿನಿಧಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿ, ಅದನ್ನು ಸಾರ್ವಜನಿಕರ ಮುಂದೆ ಇಡಬೇಕು ಎಂದರು. ಜನರ ಅಭಿಪ್ರಾಯದ ಮೇರೆಗೆ ಅಂತಿಮ ಯೋಜನೆ ಜಾರಿಗೊಳ್ಳಬೇಕು.
ಪ್ರತಿ ಆರು ತಿಂಗಳಿಗೆ ಒಮ್ಮೆ ಜನರು ಪ್ರತಿನಿಧಿಯ ಕಾರ್ಯಕ್ಷಮತೆಯ ಬಗ್ಗೆ ಮತ ನೀಡುವ ವ್ಯವಸ್ಥೆ ಇರಬೇಕು. 50% ಕ್ಕಿಂತ ಹೆಚ್ಚು ಜನ ಅಸಮಾಧಾನ ವ್ಯಕ್ತಪಡಿಸಿದರೆ, ತಿದ್ದುಪಡಿ ಅವಧಿ ನೀಡಲಾಗುತ್ತದೆ. ಅದರ ನಂತರವೂ ಸುಧಾರಣೆ ಆಗದಿದ್ದರೆ, ಪ್ರತಿನಿಧಿ ಸ್ಥಾನ ತ್ಯಜಿಸಬೇಕಾಗುತ್ತದೆ ಎಂದು ಹೇಳಿದರು. “ರೈಟ್ ಟು ರಿಕಾಲ್” ಸಂವಿಧಾನದಲ್ಲಿ ಇಲ್ಲದಿದ್ದರೂ, ಅದನ್ನು ತರಲು ಹೋರಾಟ ಮುಂದುವರಿಯುತ್ತದೆ ಎಂದರು.
ಸಾಂಪ್ರದಾಯಿಕ ರಾಜಕೀಯದಲ್ಲಿರುವ ಹಣದ ಪ್ರಭಾವ, ಪ್ರಚಾರ, ಆರೋಪ-ಪ್ರತ್ಯಾರೋಪಗಳಿಗಿಂತ ಜನರ ನೇರ ಪಾಲ್ಗೊಳ್ಳುವಿಕೆಯೇ ಮುಖ್ಯ ಎಂದು ಉಪೇಂದ್ರ ಒತ್ತಿ ಹೇಳಿದರು. “ಇದು ರಾಜಕೀಯ ಕ್ರಾಂತಿ ಅಲ್ಲ, ಇದು ಜವಾಬ್ದಾರಿ ತೆಗೆದುಕೊಳ್ಳುವ ನಾಗರಿಕರ ಚಳುವಳಿ” ಎಂದರು.
ಯಾರು ಬೇಕಾದರೂ ಈ ವೇದಿಕೆಯಲ್ಲಿ ಭಾಗವಹಿಸಿ, ತಮ್ಮ ಪ್ರದೇಶದ ಸಮಸ್ಯೆಗಳನ್ನು ಎತ್ತಿಹಿಡಿದು, ಅಭ್ಯರ್ಥಿಗಳೊಂದಿಗೆ ಸಂವಹನ ನಡೆಸಿ, ಅಥವಾ ತಾವೇ ಅಭ್ಯರ್ಥಿಯಾಗಬಹುದು ಎಂದು ಹೇಳಿದರು.
‘ದಿ ರಿಯಲ್ ಪ್ರಜಾಕೀಯ’ ಮೂಲಕ ಉಪೇಂದ್ರ ಮತ್ತೊಮ್ಮೆ ಸಾಂಪ್ರದಾಯಿಕ ರಾಜಕೀಯಕ್ಕೆ ಪರ್ಯಾಯ ಮಾರ್ಗವನ್ನು ತೋರಿಸಲು ಪ್ರಯತ್ನಿಸಿದ್ದು, ಜನರು ಹಿಂಬಾಲಕರಾಗದೆ ನಾಯಕತ್ವ ವಹಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
