ಬೆಂಗಳೂರು:
ರಾಸಲೀಲೆ ಸಿಡಿ ಪ್ರಕರಣದಲ್ಲಿ ಒಳಗೊಳದೇ ಆಟ ಆಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಯುವತಿಯ ಪೋಷಕರು ಮತ್ತು ಪ್ರಮುಖ ಆರೋಪಿ, ,ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿರುಗಿ ಬಿದ್ದಿದ್ದಾರೆ. ಸಿ.ಡಿ. ಪ್ರಕರಣದ ಹಿಂದಿನ ಸೂತ್ರಧಾರ ಡಿ.ಕೆ. ಶಿವಕುಮಾರ್ ಎಂದು ನೇರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ 30 ನಿಮಿಷಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಯುವತಿಯ ಪೋಷಕರು ಮತ್ತು ರಮೇಶ್ ಜಾರಕಿಹೊಳಿ ನೇರವಾಗಿಯೇ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು. ಈ ಮೂಲಕ ಸಿ.ಡಿ. ಪ್ರಕರಣದ ಬಂದೂಕಿನ ನಳಿಕೆಯನ್ನು ಇದೀಗ ಶಿವಕುಮಾರ್ ವಿರುದ್ಧ ತಿರುಗಿಸಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಶುಕ್ರವಾರ ಲಿಖಿತ ದೂರು ನೀಡಿದ ಬೆನ್ನಲ್ಲೇ ಇಂದು ಯುವತಿ ಪೋಷಕರು ಮತ್ತು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಎಸ್ಐಟಿ ವಿಚಾರಣೆ ಎದುರಿಸಿದ ಸಿಡಿ ಯುವತಿ ಕುಟುಂಬ: ಶಿವಕುಮಾರ್ ವಿರುದ್ಧ ಆರೋಪ
ನಗರದ ಎಸ್ಐಟಿಯ ಆಡಿಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಕಾಣಿಸಿಕೊಂಡಿದ್ದ ಸಿಡಿ ಯುವತಿಯ ಕುಟುಂಬಸ್ಥರನ್ನು ಶನಿವಾರ ಮಧ್ಯಾಹ್ನ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ್ದರು.
ಸತತ ಐದು ಗಂಟೆಗಳ ಕಾಲ ಯುವತಿಯ ಕುಟುಂಬಸ್ಥರನ್ನು ಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ವಿಚಾರಣೆಗೆ ಒಳಪಡಿಸಿದ್ದು, ಅವರ ಹೇಳಿಕೆಗಳನ್ನು ಎರಡು ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಲಾಗಿದೆ.
ಹೆಣ್ಣುಮಗಳನ್ನು ಇಟ್ಟುಕೊಂಡು ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ರಾಸಲೀಲೆ ಸಿಡಿ ಪ್ರಕರಣದ ಯುವತಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ತನಿಖಾ ತಂಡದ ಎದುರು ನಾಲ್ಕು ಗಂಟೆ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತನ್ನ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೀನಾ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ನನ್ನ ಅಕ್ಕನನ್ನು ಗೋವಾಕ್ಕೆ ಕಳುಹಿಸಿದ್ದಾರೆ. ಯಾವುದೇ ರೀತಿಯ ಬೆದರಿಕೆ ಇಲ್ಲ , ಪೊಲೀಸರು ಭದ್ರತೆ ನೀಡುತ್ತಿದ್ದಾರೆ ಎಂದು ಯುವತಿಯ ಸಹೋದರು ತಿಳಿಸಿದರು.
ಫೆಬ್ರವರಿ 5ರಂದು ಕೊನೆಯ ಬಾರಿಗೆ ತಮ್ಮ ಅಕ್ಕನೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ ಯುವತಿ ಸಹೋದರ, ನರೇಶ್ ಗೌಡ ನೀಡಿರುವ ಹೇಳಿಕೆ ಸುಳ್ಳು, ನಮ್ಮ ಅಕ್ಕ ನಮಗೆ ವಾಪಸ್ ಬೇಕು, ಡಿಕೆ ಶಿವಕುಮಾರ್ ಇಂತಹ ರಾಜಕೀಯ ಮಾಡಬಾರದು ಎಂದು ಹೇಳಿದರು.