ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಮಾಡುವ ಟೆಸ್ಟಿಂಗ್ ಯಂತ್ರಗಳಲ್ಲಿ ಲೋಪವಿದೆ ಎಂಬ ಗಂಭೀರ ಆರೋಪದ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ.
ಅರ್ಜಿದಾರ ಅಜಯ್ ಕಶ್ಯಪ್ ಅವರ ಪ್ರಕಾರ, ಟ್ರಾಫಿಕ್ ಪೊಲೀಸರು ಕಾರು ನಿಲ್ಲಿಸಿ ಮೂರು ಬಾರಿ ಪರೀಕ್ಷೆ ನಡೆಸಿದಾಗ ಮೊದಲ ಎರಡು ಬಾರಿ ನೆಗೆಟಿವ್, ಆದರೆ ಮೂರನೇ ಬಾರಿ ಪಾಸಿಟಿವ್ ತೋರಿಸಿದೆ. ಮದ್ಯ ಸೇವನೆ ಮಾಡದಿದ್ದರೂ ಪೊಲೀಸರು ₹10,000 ದಂಡ ವಿಧಿಸಿ, ಕಾರು ಸೀಜ್ ಮಾಡಿದ್ದಾರೆಂದು ದೂರಿದ್ದಾರೆ.
ಅವರು ನಂತರ ಖಾಸಗಿ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಿಕೊಂಡಿದ್ದು, ಅಲ್ಲಿ ಫಲಿತಾಂಶ ನೆಗೆಟಿವ್ ಆಗಿತ್ತು. “ಯಂತ್ರದಲ್ಲಿ ಲೋಪವಿದ್ದರೆ ನಿರಪರಾಧಿಗಳಿಗೆ ಕಳಂಕ ಬಂದು, ಅನ್ಯಾಯದ ದಂಡ ವಿಧಿಸಲಾಗುತ್ತಿದೆ,” ಎಂದು ಅರ್ಜಿದಾರ ವಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದ್ದು – ಯಂತ್ರಗಳನ್ನು ಹೇಗೆ ಮೇಂಟೈನ್ ಮಾಡಲಾಗುತ್ತಿದೆ, ಅವು ಟ್ಯಾಂಪರ್ ಪ್ರೂಫ್ ಆಗಿವೆಯೇ ಎಂಬುದರ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 3, 2025ಕ್ಕೆ ಮುಂದೂಡಲಾಗಿದೆ.