
ಬೆಂಗಳೂರು:
ಸಚಿವ ಸಂಪುಟ ಉಪ ಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತೀವ್ರ ಬರ ಪೀಡಿತ ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ (ಗ್ರೌಂಡ್ ಟೂಥ್ ವೆರಿಫಿಕೇಷನ್) ಬೆಳೆ ಪರಿಸ್ಥಿತಿ ಸಮಿಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ತಿಳಿಸಿದರು.
ಇಂದು ಅವರು ವಿಧಾನಸೌಧದಲ್ಲಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಈಗಾಗಲೇ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಾಸಾಂತ್ಯದೊಳಗೆ ವರದಿ ಪಡೆದು ಮತ್ತೊಮ್ಮೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡಿ, ಕೃಷಿಕರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕುಂದು ಕೊರತೆಗಳನ್ನು ಆಳಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿ ತಿಂಗಳು ಒಂದು ಜಿಲ್ಲೆಗೆ ಪ್ರವಾಸ ಮಾಡಿ ರೈತರ ಹೊಲಗಳಿಗೆ ನೇರವಾಗಿ ಭೇಟಿ ನೀಡಿ, ರೈತರು ಹಾಗೂ ರೈತ ಉತ್ಪಾದಕರ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಸಂಘಟನೆಯ ರೈತನಿಧಿಗಳೊಂದಿಗೆ ಸಂವಾದ ನಡೆಸಿ, ಜೊತೆಗೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಜಿಲ್ಲೆಯ ರೈತರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಚಿಂತಿಸಿ ಪ್ರತಿ ಜಿಲ್ಲೆಗಳಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಬೇಕೆಂದು ಕಾರ್ಯಕ್ರಮ ಹಾಕಿಕೊಂಡು ಇದೇ ತಿಂಗಳು 29ರಂದು ರಾಜ್ಯದ ಮಧ್ಯಭಾಗದ ಚಿತ್ರದುರ್ಗ ಜಿಲ್ಲೆಯಿಂದ ರೈತರ ಸಂವಾದ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಮತ್ತು ತಾವೇ ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಜೂನ್ 1 ರಿಂದ ಆಗಸ್ಟ್ 24ರವರೆಗೆ, ವಾಡಿಕೆ ಮಳೆ-651 ಮಿ.ಮಿ ಆಗಬೇಕಿದ್ದು, ವಾಸ್ತವಿಕ ಮಳೆ-487 ಮಿ.ಮಿ ಆಗಿದೆ. ಶೇಕಡಾ-25% ಕೊರತೆಯುಂಟಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ-82.35 ಲಕ್ಷ ಹೆಕ್ಟೇರ್, ಸಾಧನೆ-64.84 ಲಕ್ಷ ಹೆಕ್ಟರ್ (ಶೇ.79), ಹಿಂದಿನ ವರ್ಷ 71.74 ಲಕ್ಷ ಹೆಕ್ಟರ್ ಬಿತ್ತನೆಯಾಗಿತ್ತು. 5.54 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳು ಬೇಡಿಕೆಯಿದ್ದು, 77,445 ಲಭ್ಯತೆಯಿದೆ. 3.30 ಲಕ್ಷ ಕ್ವಿಂಟಲ್ ವಿತರಣೆ ಮಾಡಲಾಗಿದೆ. 80 ಸಾವಿರ ಕ್ವಿಂಟಲ್ ಆರ್.ಎಸ್.ಕೆ ಗಳಲ್ಲಿ ಪ್ರಸ್ತುತ ಬೀಜ ಲಭ್ಯತೆಯಿದೆ.
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳು 25.47 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯಿದ್ದು, ದಾಸ್ತಾನು- 33.20 ಲಕ್ಷ ಮೆಟ್ರಿಕ್ ಟನ್ ಒಟ್ಟು ಲಭ್ಯವಿದ್ದು, 19.89 ಲಕ್ಷ ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. 13.30 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಉಳಿಕೆಯಾಗಿದೆ.
ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆಯಿರುವುದು. ಸತತ ಮೂರು ವಾರಗಳ ಕಾಲ ಒಣ ಹವೆ ಇರುವುದು. ಶೇ.75ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿರುವುದು. ಮಣ್ಣಿನಲ್ಲಿ ಶೇ.50ಕ್ಕಿಂತ ಕಡಿಮೆ ತೇವಾಂಶ ಇರುವುದು. ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಆಧರಿಸಿ, ಬರಪರಿಸ್ಥಿತಿ ಘೋಷಣೆ ಮಾಡಲು ಮಾನದಂಡಗಳಾಗಿವೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಅಧಿಸೂಚಿತ ಬೆಳೆಗಳು-36 ಇದ್ದು, ಈಗಾಗಲೇ 16.23 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಒಟ್ಟು 15.31 ಲಕ್ಷ ಹೆಕ್ಟೇರ್ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. 2022-23ನೇ ಸಾಲಿನಲ್ಲಿ 12.64 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿ ರೂ.1114.17 ಕೋಟಿಗಳನ್ನು ಪಡೆದುಕೊಂಡಿರುತ್ತಾರೆ.
ಪಿ.ಎಂ.ಎಫ್.ಎಂ.ಇ ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣೆಗಾಗಿ ಕೇಂದ್ರ ಸರ್ಕಾರದಿಂದ ಶೇಕಡಾ 35 ರಷ್ಟು ಸಹಾಯಧನ ರಾಜ್ಯ ಸರ್ಕಾರದಿಂದ ಶೇಕಡಾ 15 ರಷ್ಟು ಸಹಾಯಧನ (ಒಟ್ಟು ಶೇಕಡಾ 50ರಷ್ಟು) ಗರಿಷ್ಠ ರೂ.15.00ಲಕ್ಷಗಳ ಅನುದಾನ ಒದಗಿಸಲಾಗುವುದು.
ಕೃಷಿ ಮೂಲ ಸೌಕರ್ಯ ನಿರ್ಮಿಸಲು ಗರಿಷ್ಠ ರೂ.2 ಕೋಟಿಗಳ ಸಾಲದ ಮೊತ್ತಕ್ಕೆ 3% ಬಡ್ಡಿಯಲ್ಲಿ ಕಡಿತಗೊಳಿಸಲಾಗುವುದು. ಜಾಗೃತ ಕೋಶದ ಕಾರ್ಯ ವೈಖರಿಯನ್ನು ಚುರುಕುಗೊಳಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 94 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಇವುಗಳ ಪೈಕಿ 33 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ರೂ.10ಲಕ್ಷಗಳ ದಂಡ ವಿಧಿಸಲಾಗಿದೆ.
ಕೃಷಿ ಭಾಗ್ಯ ರೂ.100 ಕೋಟಿ, ಕೃಷಿ ನವೋದ್ಯಮ ರೂ.10 ಕೋಟಿ, 100 ಅತ್ಯಾಧುನಿಕ ಕಟಾವು ಯಂತ್ರಗಳ ಕೇಂದ್ರ ಸ್ಥಾಪಿಸಲು ರೂ.50 ಕೋಟಿ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ನಂದಿನಿ ಮಾದರಿಯಲ್ಲಿ ಬ್ಯಾಂಡಿಂಗ್ ಮಾಡಲು ರೂ.10 ಕೋಟಿಗಳು. ರೈತ ಉತ್ಪಾದಕ ಸಂಸ್ಥೆಗಳನ್ನು ಹಿಂದುಳಿದ ತಾಲ್ಲೂಕುಗಳಲ್ಲಿ ಬಲವರ್ಧನೆ ಮಾಡಲು ನೀಡುವ ತಲಾ ರೂ.20 ಲಕ್ಷಗಳ ಸಾಲಕ್ಕೆ ಶೇಕಡಾ 4ರಷ್ಟು ಬಡ್ಡಿ ಸಹಿತ ಸಹಾಯಧನ ಸೇರಿದಂತೆ ನೂತನ ಯೋಜನೆಗಳನ್ನು ಘೋಷಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿ.ಒ) ಉತ್ಪಾದಿಸಿದ ಉತ್ಪನ್ನಗಳನ್ನು ರಫ್ತು ಮಾಡಲು ಗೋದಾಮು, ಶೀತಲ ಗೃಹ ಹಾಗೂ ಇತರೆ ಮೂಲ ಸೌಕರ್ಯಗಳನ್ನು ನಿರ್ಮಿಸಲು ಯೋಜನಾ ವೆಚ್ಚದ ಗರಿಷ್ಟ 20 ರಷ್ಟು ರೂ.1 ಕೋಟಿಗೂ ಮೀರದಂತೆ ಸೀಡ್ ಕ್ಯಾಪಿಟಲ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.