Home ಆರೋಗ್ಯ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಮೂಲ ಪತ್ತೆ ಹಚ್ಚಲು ಡಿಸಿಎಂ ಸೂಚನೆ

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಮೂಲ ಪತ್ತೆ ಹಚ್ಚಲು ಡಿಸಿಎಂ ಸೂಚನೆ

39
0
  • ತಜ್ಞ ವೈದ್ಯರಿಂದ ನಾಳೆಯಿಂದಲೇ ತೀವ್ರ ಅಧ್ಯಯನ
  • ಕಪ್ಪು ಶಿಲೀಂದ್ರ ಚಿಕಿತ್ಸೆಗೆ ಹೊಸ ಮಾರ್ಗಸೂಚಿ ಶೀಘ್ರ

ಬೆಂಗಳೂರು:

ಕೋವಿಡ್-19 ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಅಪಾಯಕಾರಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಮೂಲವನ್ನು ಪತ್ತೆ ಹಚ್ಚಲು ಸುಪ್ರಸಿದ್ಧ ವೈದ್ಯರು ಹಾಗೂ ಸೂಕ್ಷ್ಮಾಣುಜೀವಿ ತಜ್ಞರಿಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನಿರ್ದೇಶನ ನೀಡಿದರು.

ಬೆಂಗಳೂರಿನಲ್ಲಿ ಭಾನುವಾರ ಈ ಬಗ್ಗೆ ರಾಜ್ಯದ ಖ್ಯಾತ ತಜ್ಞ ವೈದ್ಯರೂ ಹಾಗೂ ಕೋವಿಡ್ & ಬ್ಲ್ಯಾಕ್ ಫಂಗಸ್ ಚಿಕಿತ್ಸಾ ಶಿಷ್ಟಾಚಾರ ಸಮಿತಿಗಳ ತಜ್ಞರ ಸಭೆಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಿದ ನಂತರ ಡಿಸಿಎಂ, ನಾಳೆಯಿಂದಲೇ (ಸೋಮವಾರ) ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಮೂಲ ಹುಡುಕುವಂತೆ ಸೂಚಿಸಿದರು.

ಅಲ್ಲದೆ, ಅತಿ ಶೀಘ್ರದಲ್ಲಿಯೇ ಈ ಬಗ್ಗೆ ವರದಿ ನೀಡಬೇಕು ಹಾಗೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಹೊಸ ಮಾರ್ಗಸೂಚಿ ರೂಪಿಸುವಂತೆಯೂ ಅವರು ನಿರ್ದೇಶನ ತಜ್ಞರಿಗೆ ತಿಳಿಸಿದರು.

ಅತ್ಯಂತ ಮಹತ್ವದ ಈ ಸಭೆಯ ಆರಂಭದಲ್ಲಿ ಮಣಿಪಾಲ್ ಆಸ್ಪತ್ರೆಯ ಇ ಎನ್ ಟಿ ತಜ್ಞ ವೈದ್ಯರೂ  ಡಾ.ಸಂಪತ್ ಚಂದ್ರ ಪ್ರಸಾದ್ ರಾವ್ ನೀಡಿದ ಪ್ರಾತ್ಯಕ್ಷಿಕೆಯಲ್ಲಿ, ಜಗತ್ತಿನ ಯಾವ ದೇಶದಲ್ಲೂ ಕೋವಿಡ್ ನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳದ ಬ್ಲ್ಯಾಕ್ ಫಂಗಸ್ ಭಾರತದಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.

DCm reviews black fungus meeting1

ಡಾ.ಸಂಪತ್ ಹೇಳುವುದೇನು?

  • ಬ್ಲಾಕ್ ಫಂಗಸ್ ಮೊದಲ ಅಲೆ ವೇಳೆ ಕಂಡುಬರಲಿಲ್ಲ. ಈಗ ಏಕೆ ಕಾಣಿಸಿಕೊಂಡಿದೆ? ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿರುವ ಆಮ್ಲಜನಕದಿಂದ ಬರುತ್ತಿದೆಯಾ? ಯಾವುದೇ ದೇಶದಲ್ಲೂ ಕಾಣಿಸಿಕೊಳ್ಳದ ಈ ಕಾಯಿಲೆ ನಮ್ಮಲ್ಲೇ ಕಂಡು ಬಂದಿದ್ದೇಕೆ? ನಮ್ಮಲ್ಲಿನ ಲೋಪವೇನು? ಇದನ್ನು ಪತ್ತೆ ಮಾಡುವ ಪ್ರಯತ್ನ ಮಾಡಬೇಕು.
  • ಸದ್ಯಕ್ಕೆ ಬಳಕೆಯಾಗುತ್ತಿರುವ ಆಕ್ಸಿಜನ್ ಶುದ್ದವಾಗಿದೆಯೇ? ಆಮ್ಲಜನಕ ಸಾಂದ್ರಕಗಳಿಗೆ ಡಿಸ್ಟಲರಿ ನೀರು ಬಳಕೆಯಾಗುತ್ತಿದೆಯಾ? ಇಲ್ಲವಾ? ಐಸಿಯುಗಳ ಸ್ವಚ್ಛತೆ ಯಾವ ಮಟ್ಟದಲ್ಲಿದೆ? ಆಸ್ಪತ್ರೆಗಳ ಸ್ವಚ್ಛತೆ ಹಾಗೂ ಆಮ್ಲಜನಕ ಸಿಲಿಂಡರ್ ಗಳ ಸ್ವಚ್ಛತೆಯನ್ನು ವೈದ್ಯಕೀಯ ಮಾರ್ಗಸೂಚಿ ಪ್ರಕಾರ ಮಾಡಲಾಗುತ್ತಿದೆಯಾ? ಅಲ್ಲದೆ, ನೈಟ್ರೋಜನ್ ಬಳಸಿ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ. ಆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ? ಸದ್ಯಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುವ ಆಮ್ಲಜನಕವನ್ನೆಲ್ಲ ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದರಿಂದ ಅಡ್ಡ ಪರಿಣಾಮ ಉಂಟಾಗಿರಬಹುದಾ? ಆಸ್ಪತ್ರೆಗಳಲ್ಲಿನ  ಆಮ್ಲಜನಕ ಘಟಕ, ಅವುಗಳಿಂದ ಪೂರೈಕೆಯಾಗುವ ಪೈಪುಗಳ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆಯಾ? ಈ ಎಲ್ಲ ಪ್ರಶ್ನೆಗಳ ಬಗ್ಗೆ ಉತ್ತರ ಹುಡುಕುವಂತೆ ತಜ್ಞ ವೈದ್ಯರಿಗೆ ಸೂಚನೆ ನೀಡಲಾಗಿದೆ.

ರೆಫರ್ ಮಾಡುವ ಆಸ್ಪತ್ರೆಗಳ ಪರಿಶೀಲನೆ

ಕಳೆದ 7 ದಿನಗಳಲ್ಲಿ 700 ಬ್ಲ್ಯಾಕ್ ಫಂಗಸ್ ಪೀಡಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಸದ್ಯಕ್ಕೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ರೋಗಿಗಳ ಸಣ್ಣಪುಟ್ಟ ಆಸ್ಪತ್ರೆಗಳಿಂದ ರೆಫರ್ ಆಗಿ ಬಂದಿದ್ದಾರೆ. ಇವರನ್ನು ರೆಫರ್ ಮಾಡಿದ ಆಸ್ಪತ್ರೆಗಳ ವ್ಯವಸ್ಥೆಯನ್ನೂ ಪರಿಶೀಲನೆ ಮಾಡುವಂತೆ ತಜ್ಞರಿಗೆ ತಿಳಿಸಲಾಗಿದೆ. ಅಲ್ಲೆಲ್ಲ ಚಿಕಿತ್ಸಾ ಶಿಷ್ಟಾಚಾರ ಪಾಲಿಸಲಾಗಿದೆಯಾ? ಅಲ್ಲಿ ಬಳಕೆ ಮಾಡಲಾದ ಆಕ್ಸಿಜನ್ ಉತ್ತಮ ಗುಣಮಟ್ಟದ್ದೇ? ಅದು ಎಲ್ಲಿಂದ ಬಂದಿದೆ? ಆ ಮೂಲವನ್ನು ಹುಡುಕಿ ಅಧ್ಯಯನ ಮಾಡಲು ತಿಳಿಸಲಾಗಿದೆ. ಈ ಕೆಲಸ ನಾಳೆಯಿಂದಲೇ‌ ನಡೆಯಲಿದೆ ಎಂದು‌ ಉಪ ಮುಖ್ಯಮಂತ್ರಿ ತಿಳಿಸಿದರು.

ರೋಗಿಗಳಿಗೆ ಆಸ್ಪತ್ರೆಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ನಾವು ಖಾತರಿ ಮಾಡಿಕೊಳ್ಳಬೇಕಿದೆ. ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ಶಿಷ್ಟಾಚಾರವನ್ನು ಚಾಚೂ ತಪ್ಪದೆ ಪಾಲಿಸಲಾಗಿದೆಯಾ? ಬ್ಲ್ಯಾಕ್ ಫಂಗಸ್ ಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆಯಾ? ಸರಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಪರಿಣಾಮಕಾರಿಯಾಗಿ ಬಳಕೆ ಆಗುತ್ತಿವೆಯಾ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಮಾಡಲಾಗುತ್ತಿದ್ದು, ಸೋಮವಾರದಿಂದಲೇ ತಜ್ಞರ ತಂಡಗಳು ಅಧ್ಯಯನ ನಡೆಸಿ ಅತಿ ಶೀಘ್ರದಲ್ಲಿಯೇ ವರದಿ ನೀಡಲಿವೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಉಪೇಕ್ಷೆ ಮಾಡುವ ಪ್ರಶ್ನೆ ಇಲ್ಲ ಎಂದು ಡಿಸಿಎಂ ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕೋವಿಡ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ ಅಧ್ಯಕ್ಷ ಡಾ.ಸಚ್ಚಾದಾನಂದ, ಸದಸ್ಯರಾದ ಡಾ.ರವಿ, ಡಾ.ಶಶಿಭೂಷಣ, ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ ಅಧ್ಯಕ್ಷೆ ಡಾ.ಅಂಬಿಕಾ, ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಖ್ಯಾತ ತಜ್ಞ ವೈದ್ಯರು ಇದ್ದರು.

LEAVE A REPLY

Please enter your comment!
Please enter your name here