ಗೇಮ್ಸ್ಕ್ರಾಫ್ಟ್ ಹಣ ಅಕ್ರಮ ವರ್ಗಾವಣೆ ಪ್ರಕರಣ: ₹1,906 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ ಇಡಿ
ಬೆಂಗಳೂರು, ಜುಲೈ 24: ರಮ್ಮಿಕಲ್ಚರ್ ಆ್ಯಪ್ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಗೇಮ್ಸ್ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಷೇರುದಾರರು ಹಾಗೂ ಸಂಬಂಧಿತ ಸಂಸ್ಥೆಗಳ ಸುಮಾರು ₹1,906 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಇಡಿ ಪ್ರಕಟಣೆಯ ಪ್ರಕಾರ, ಜುಲೈ 22ರಂದು ಹೊರಡಿಸಲಾದ ತಾತ್ಕಾಲಿಕ ಜಪ್ತಿ ಆದೇಶದ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ. ಆನ್ಲೈನ್ನಲ್ಲಿ ನೈಜ ಹಣದ ರಮ್ಮಿ ಆಟಗಾರರಿಗೆ ವಂಚನೆ ಎಸಗಿ ಗಳಿಸಿದ ಅಪರಾಧದ ಆದಾಯವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದ ತನಿಖೆಯ ಭಾಗವಾಗಿ ಈ ಜಪ್ತಿ ನಡೆದಿದೆ. ಜಪ್ತಿಗೊಂಡ ಆಸ್ತಿಗಳಲ್ಲಿ ಬ್ಯಾಂಕ್ ಖಾತೆಗಳಲ್ಲಿನ ಹಣ, ಸ್ಥಿರ ಠೇವಣಿಗಳು, ಮ್ಯೂಚುವಲ್ ಫಂಡ್ಗಳು, ಕನ್ವರ್ಟಿಬಲ್ ನೋಟ್ಸ್, ಇಕ್ವಿಟಿ ಷೇರುಗಳು, ಫಾರ್ಮ್ಹೌಸ್ ಹಾಗೂ ಕಂಪನಿಯ ಷೇರುದಾರರು, ಅವರ ಕುಟುಂಬ ಸದಸ್ಯರು, ಕುಟುಂಬ ಟ್ರಸ್ಟ್ಗಳು ಮತ್ತು ಸಂಬಂಧಿತ ಸಂಸ್ಥೆಗಳ ಹೆಸರಿನಲ್ಲಿರುವ ವಸತಿ ಹಾಗೂ ವಾಣಿಜ್ಯ ಸ್ಥಿರಾಸ್ತಿಗಳು ಸೇರಿವೆ.
ತೆಲಂಗಾಣದಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಅಡಿಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳ ಎಫ್ಐಆರ್ಗಳ ಆಧಾರದಲ್ಲಿ ಪಿಎಂಎಲ್ಎ ಅಡಿಯಲ್ಲಿ ತನಿಖೆ ಆರಂಭಿಸಲಾಗಿತ್ತು ಎಂದು ಇಡಿ ತಿಳಿಸಿದೆ. ಮೇ 7ರಿಂದ 13ರವರೆಗೆ ಹಾಗೂ ಜೂನ್ 20ರಿಂದ 21ರವರೆಗೆ ಗೇಮ್ಸ್ಕ್ರಾಫ್ಟ್ ಕಚೇರಿಗಳು ಮತ್ತು ನಿರ್ದೇಶಕರು ಹಾಗೂ ಪ್ರಮುಖ ಸಿಬ್ಬಂದಿಯ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಹಲವು ಮಹತ್ವದ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಎಲೆಕ್ಟ್ರಾನಿಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಡಿ ತನಿಖೆಯ ಪ್ರಕಾರ, ಗೇಮ್ಸ್ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಮ್ಮಿಟೈಮ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ರಮ್ಮಿಕಲ್ಚರ್, ರಮ್ಮಿಪ್ರೈಮ್, ಪ್ಲೇಶಿಪ್ ಮತ್ತು ರಮ್ಮಿಟೈಮ್ ಸೇರಿದಂತೆ ಹಲವು ಬ್ರ್ಯಾಂಡ್ಗಳ ಮೂಲಕ ಆನ್ಲೈನ್ ನೈಜ ಹಣದ ಗೇಮಿಂಗ್ ವೇದಿಕೆಗಳನ್ನು ನಡೆಸುತ್ತಿದ್ದು, ದೇಶಾದ್ಯಂತ ಸುಮಾರು ಮೂರು ಕೋಟಿ ಬಳಕೆದಾರರನ್ನು ಹೊಂದಿದ್ದವು. ಆನ್ಲೈನ್ ನೈಜ ಹಣದ ಗೇಮಿಂಗ್ ನಿಷೇಧಿಸಲಾಗಿರುವ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿಯೂ ಗಣನೀಯ ಸಂಖ್ಯೆಯ ಬಳಕೆದಾರರು ಇದ್ದರು ಎಂದು ಇಡಿ ಆರೋಪಿಸಿದೆ. ಪಣವಾಗಿ ಇಡಲಾದ ಮೊತ್ತದ ಮೇಲೆ 10ರಿಂದ 15 ಶೇಕಡಾ ವರೆಗೆ ವೇದಿಕೆ ಕಮಿಷನ್ ವಸೂಲಿ ಮಾಡಿ ಕಂಪನಿಗಳು ಆದಾಯ ಗಳಿಸಿದ್ದವು ಎಂದು ತಿಳಿಸಿದೆ.
ಬಳಕೆದಾರರಿಗೆ ಪಾರದರ್ಶಕ ಹಾಗೂ ಬಾಟ್ಗಳಿಲ್ಲದ ಆಟದ ಭರವಸೆ ನೀಡುತ್ತಿದ್ದರೂ, ಅವರ ಅರಿವಿಲ್ಲದೆ ಸ್ವಯಂಚಾಲಿತ ಬಾಟ್ಗಳನ್ನು ಬಳಸಲಾಗಿದ್ದು, ಇದರಿಂದ ಬಳಕೆದಾರರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಕಂಪನಿಗಳಿಗೆ ಅಪರಾಧದ ಆದಾಯ ಲಭಿಸಿದೆ ಎಂದು ಇಡಿ ಆರೋಪಿಸಿದೆ.
ಸುಮಾರು ₹1,035 ಕೋಟಿ ಮೊತ್ತವನ್ನು ಜಾಹೀರಾತು ಹಾಗೂ ಪ್ರಚಾರಕ್ಕೆ ವೆಚ್ಚ ಮಾಡಿ ಹೊಸ ಬಳಕೆದಾರರನ್ನು ಆಕರ್ಷಿಸಲಾಗಿದೆ. ಬೋನಸ್, ರೆಫರಲ್ ಪ್ರೋತ್ಸಾಹಧನ, ಉಚಿತ ಟೂರ್ನಮೆಂಟ್ ಪ್ರವೇಶ ಹಾಗೂ ಇತರೆ ಪ್ರಚಾರಗಳ ಮೂಲಕ ನಿರಂತರ ಆಟಕ್ಕೆ ಉತ್ತೇಜನ ನೀಡಲಾಗಿದ್ದು, ಹಣ ಹಿಂಪಡೆಯುವಲ್ಲಿ ನಿರ್ಬಂಧ ಹೇರಿದ ಕ್ರಮಗಳು ಮತ್ತು ವಿಶೇಷ ಯೋಜನೆಗಳ ಮೂಲಕ ಹೆಚ್ಚಿನ ಹಣ ಠೇವಣಿ ಮಾಡಲು ಬಳಕೆದಾರರನ್ನು ಪ್ರೇರೇಪಿಸಲಾಗಿದೆ ಎಂದು ಇಡಿ ತಿಳಿಸಿದೆ.
ಈ ಚಟುವಟಿಕೆಗಳಿಂದ ಗಳಿಸಿದ ಅಪರಾಧದ ಆದಾಯವನ್ನು ಲಾಭಾಂಶ ಪಾವತಿ, ಷೇರು ಮರುಖರೀದಿ ಹಾಗೂ ಹಣಕಾಸು ಹೂಡಿಕೆಗಳು ಮತ್ತು ದುಬಾರಿ ಸ್ಥಿರಾಸ್ತಿಗಳ ಮೂಲಕ ಕಾನೂನುಬದ್ಧ ಆಸ್ತಿಗಳಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂದು ಇಡಿ ಆರೋಪಿಸಿದೆ.
ಈ ಮೊದಲು ಸುಮಾರು ₹495 ಕೋಟಿ ಮೌಲ್ಯದ ಚರಾಸ್ತಿಗಳನ್ನು ಫ್ರೀಜ್ ಮಾಡಲಾಗಿದ್ದು, ₹11 ಲಕ್ಷ ನಗದು ಹಾಗೂ ಸುಮಾರು 2.30 ಕೆಜಿ ಚಿನ್ನದ ಗಟ್ಟಿಗಳು ಸೇರಿದಂತೆ ಚಿನ್ನ ಮತ್ತು ವಜ್ರಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಜಪ್ತಿಯೊಂದಿಗೆ ಈ ತನಿಖೆಯಲ್ಲಿ ಇದುವರೆಗೆ ಜಪ್ತಿ, ಫ್ರೀಜ್ ಮತ್ತು ವಶಪಡಿಸಿಕೊಂಡಿರುವ ಅಪರಾಧದ ಆದಾಯದ ಒಟ್ಟು ಮೌಲ್ಯ ಸುಮಾರು ₹2,401 ಕೋಟಿಗೆ ಏರಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
