35 ಮಿಲಿಯನ್ ಡಾಲರ್ ಕ್ರಿಪ್ಟೊ ಒಟಿಸಿ ವಂಚನೆ ಪ್ರಕರಣ: ಬೆಂಗಳೂರಿನ ವ್ಯಕ್ತಿ ಸೇರಿ ಹಲವರ ವಿರುದ್ಧ ಇಡಿ ತನಿಖೆ
ಬೆಂಗಳೂರು, ಜುಲೈ 21: ವರ್ಚುವಲ್ ಡಿಜಿಟಲ್ ಆಸ್ತಿಗಳ (ವಿಡಿಎ) ಓವರ್-ದಿ-ಕೌಂಟರ್ (ಒಟಿಸಿ) ವಹಿವಾಟಿನ ಹೆಸರಿನಲ್ಲಿ ನಡೆದಿರುವ ಬಹುಕೋಟಿ ಕ್ರಿಪ್ಟೊ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ವಲಯ ಕಚೇರಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಆರಂಭಿಸಿದೆ. ಸೌತ್ ಅಂಡಮಾನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಡಚ್ ಸಂಸ್ಥೆಯ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ.
ಮಲ್ಟಿವರ್ಸ್ಎಕ್ಸ್, ಕಾವಾ, ಬಿಇಎಎಂ, ಗ್ರಾಸ್, ಎಸ್ಯುಐ, ವಾನಾ ಮತ್ತು ಎಜಿಎಲ್ಡಿ ಸೇರಿದಂತೆ ವಿವಿಧ ಕ್ರಿಪ್ಟೊ ಟೋಕನ್ಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿ, ಬಳಿಕ ಟೋಕನ್ಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನೀಡದೆ ಹೂಡಿಕೆದಾರರಿಗೆ ವಂಚನೆ ಎಸಗಲಾಗಿದೆ ಎಂದು ಇಡಿ ಆರೋಪಿಸಿದೆ.
ಮೊಹಮ್ಮದ್ ವಸೀಮ್, ಸೌರಭ್ ದಿವಾನ್ ಮತ್ತು ವೈಭವ್ ಗುಪ್ತಾ ಆರೋಪಿಗಳೆಂದು ಗುರುತಿಸಲಾಗಿದ್ದು, ಖಾಸಗಿ ಟೆಲಿಗ್ರಾಂ ಗುಂಪುಗಳು, ನೇರ ಸಭೆಗಳು ಹಾಗೂ ಸುಳ್ಳು ಮಾಹಿತಿಗಳ ಮೂಲಕ ದೂರುದಾರರ ವಿಶ್ವಾಸ ಗಳಿಸಿ ಹೆಚ್ಚಿನ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು ಎಂದು ಇಡಿ ತಿಳಿಸಿದೆ. ಸಂಗ್ರಹಿಸಲಾದ ಹಣವನ್ನು ಕ್ರಿಪ್ಟೊ ವಾಲೆಟ್ಗಳ ಮೂಲಕ ಬೆಂಗಳೂರಿನ ರವೀಂದ್ರ ಕೆ ಅವರಿಗೆ ವರ್ಗಾಯಿಸಲಾಗಿದ್ದು, ಒಟಿಸಿ ವ್ಯವಹಾರಗಳ ಹಿಂದಿನ ಪ್ರಮುಖ ಸಂಚುಕೋರ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದೆ.


ಜುಲೈ 18 ಮತ್ತು 19ರಂದು ವಿವಿಧ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಗಳು ತಮ್ಮನ್ನು ಕ್ರಿಪ್ಟೊ ಕ್ಷೇತ್ರದ ‘ಕೀ ಒಪಿನಿಯನ್ ಲೀಡರ್ಸ್’ ಎಂದು ಬಿಂಬಿಸಿ, ಟೆಲಿಗ್ರಾಂ, ವಾಟ್ಸ್ಆಪ್, ಇನ್ಸ್ಟಾಗ್ರಾಂ ಹಾಗೂ ವೆಬ್ಸೈಟ್ಗಳ ಮೂಲಕ ಟೋಕನ್ ಹೂಡಿಕೆಗಳನ್ನು ಪ್ರಚಾರ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭ ಮತ್ತು ರಿಯಾಯಿತಿ ದರದ ಟೋಕನ್ ಹಂಚಿಕೆ ಭರವಸೆ ನೀಡಿ ವಿಡಿಎ ರೂಪದಲ್ಲಿ ಹಣ ಸಂಗ್ರಹಿಸಿ, ಬಳಿಕ ಆ ಹಣವನ್ನು ವೈಯಕ್ತಿಕ ವೆಚ್ಚ, ವ್ಯವಹಾರ ಹಾಗೂ ಚರ ಮತ್ತು ಅಚರ ಆಸ್ತಿಗಳ ಹೂಡಿಕೆಗೆ ಬಳಸಿರುವ ಆರೋಪವಿದೆ.
ಶೋಧದ ವೇಳೆ ಡಿಜಿಟಲ್ ಸಾಧನಗಳು, ಇ-ಮೇಲ್ ದಾಖಲೆಗಳು ಹಾಗೂ ಅಪರಾಧದ ಹಣ ವರ್ಗಾವಣೆಗೆ ಬಳಸಲಾಗಿದೆ ಎನ್ನಲಾದ ಕ್ರಿಪ್ಟೊ ವಾಲೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. 8,700 ಯುಎಸ್ಡಿಟಿ ಮೌಲ್ಯದ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನೂ ಜಪ್ತಿ ಮಾಡಲಾಗಿದೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಸುಮಾರು 10 ಮಿಲಿಯನ್ ಅಮೆರಿಕನ್ ಡಾಲರ್ಗಿಂತ ಹೆಚ್ಚಿನ, ಸುಮಾರು 35 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಂಚನೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ. ಇದೇ ರೀತಿಯಲ್ಲಿ ಇನ್ನೂ ಹಲವು ವಿದೇಶಿ ಸಂಸ್ಥೆಗಳು ಹಾಗೂ ಹೂಡಿಕೆದಾರರೂ ವಂಚನೆಗೆ ಒಳಗಾಗಿರುವ ಸಾಧ್ಯತೆಯಿದ್ದು, ಅವರು ಇನ್ನೂ ದೂರು ದಾಖಲಿಸಿಲ್ಲ ಎಂದು ಹೇಳಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.