ಬೆಂಗಳೂರು: ಜಾರಿ ನಿರ್ದೇಶನಾಲಯದ (ಇಡಿ) ಮಂಗಳೂರು ಉಪವಲಯ ಕಚೇರಿಯು ಶಿವಾನಂದ ಸಿದ್ದಪ್ಪ ನೀಲಣ್ಣವರ ಹಾಗೂ ಅವರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಘಟಕಗಳಿಗೆ ಸೇರಿದ ₹427.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ತಿಳಿಸಿದೆ.
ಅಕ್ಟೋಬರ್ 30ರ ಈ ಆದೇಶವು ಎಂ/ಎಸ್ ಶಿವಂ ಅಸೋಸಿಯೇಟ್ಸ್ ಮತ್ತು ಇತರರ ವಿರುದ್ಧದ ಇಡಿ ತನಿಖೆಗೆ ಸಂಬಂಧಿಸಿದೆ. ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ತನಿಖೆ ಆರಂಭವಾಗಿತ್ತು.

ತಿಂಗಳಿಗೆ ಶೇಕಡಾ 3ರಷ್ಟು ಖಚಿತ ಆದಾಯ ಹಾಗೂ ಹೊಸ ಹೂಡಿಕೆದಾರರನ್ನು ಪರಿಚಯಿಸಿದರೆ ಶೇಕಡಾ 0.5ರಷ್ಟು ಕಮಿಷನ್ ನೀಡುವ ಭರವಸೆಯೊಂದಿಗೆ 35,000ಕ್ಕೂ ಹೆಚ್ಚು ಹೂಡಿಕೆದಾರರಿಂದ ಸುಮಾರು ₹2,459.49 ಕೋಟಿ ಸಂಗ್ರಹಿಸಲಾಗಿದೆ ಎಂದು ಇಡಿ ಆರೋಪಿಸಿದೆ.
ತಾತ್ಕಾಲಿಕವಾಗಿ ಜಪ್ತಿ ಮಾಡಿದ ಆಸ್ತಿಗಳಲ್ಲಿ ಸುಮಾರು ₹367.78 ಕೋಟಿ ಮೌಲ್ಯದ ಸ್ಥಿರ ಠೇವಣಿಗಳು, 47 ಖಾತೆಗಳಲ್ಲಿರುವ ₹44.38 ಕೋಟಿ ಬ್ಯಾಂಕ್ ಠೇವಣಿ, ₹13.69 ಕೋಟಿ ಮೌಲ್ಯದ 42 ಸ್ಥಿರಾಸ್ತಿಗಳು ಹಾಗೂ ₹1.32 ಕೋಟಿ ಮೌಲ್ಯದ ಷೇರುಗಳು ಸೇರಿವೆ. ಸ್ಥಿರಾಸ್ತಿಗಳಲ್ಲಿ ಕೃಷಿ ಜಮೀನು, ಬಂಗಲೆಗಳು ಹಾಗೂ ಡೆವಲಪರ್ಗಳ ಅಪಾರ್ಟ್ಮೆಂಟ್ ಬುಕ್ಕಿಂಗ್ಗಳು ಸೇರಿವೆ.
ಆಗಸ್ಟ್ನಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿಯ ಎಂಟು ಸ್ಥಳಗಳಲ್ಲಿ ಶೋಧ ನಡೆಸಿ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಇಡಿ ತಿಳಿಸಿದೆ. ಈ ಹಿಂದೆ ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ಠೇವಣಿಗಳಲ್ಲಿದ್ದ ₹2.02 ಕೋಟಿಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.
ನೀಲಣ್ಣವರನ್ನು ಆಗಸ್ಟ್ 13ರಂದು ಬಂಧಿಸಲಾಗಿತ್ತು. ಐದು ಆರೋಪಿತ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಅಕ್ಟೋಬರ್ 9ರಂದು ಮಂಗಳೂರಿನ ಪಿಎಂಎಲ್ಎ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ ಎಂದು ಇಡಿ ತಿಳಿಸಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.
