ಬೆಂಗಳೂರು:
ವಿದ್ಯಾರ್ಥಿ ರಿಯಾಯ್ತಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆ ನಿವಾರಿಸಿ ಸಕಾಲದಲ್ಲಿ ಪಾಸ್ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಬಸ್ ಪಾಸ್ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಕುರಿತು ಸಕಾಲ ಮತ್ತು ಸೇವಾ ಸಿಂಧು ಅಧಿಕಾರಿಗಳು ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವಾಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ರಿಯಾಯ್ತಿ ಬಸ್ ಪಾಸ್ ಪಡೆಯುವ ಸಂಬಂಧದಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ನಮ್ಮ ಕಚೇರಿಗೆ ಇ-ಮೇಲ್ ಮೂಲಕ, ಪತ್ರಗಳ ಮೂಲಕ ದೂರುಗಳು ಬಂದಿವೆ. ಪ್ರವಾಸದ ಸಮಯದಲ್ಲಿ ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕುರಿತ ಸಮಸ್ಯೆಗಳನ್ನು ನನ್ನಲ್ಲೂ ಹೇಳಿಕೊಂಡಿದ್ದು, ಪಾಸ್ ಪಡೆಯುವಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕೆಂದರು.
ಪ್ರಸ್ತುತ ಶೈಕ್ಷಣಿಕ ವರ್ಷ ಬಹಳ ತಡವಾಗಿ ಆರಂಭವಾಗಿದೆ. ಈ ಬಾರಿ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲವೆಂದು ಇಲಾಖೆಯ ಆದೇಶವಿದ್ದಾಗ್ಯೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿರುವುದು ಸಂತೋಷದ ಹಾಗೂ ಸ್ಪೂರ್ತಿದಾಯಕ ಸಂಗತಿಯಾಗಿದೆ. ಆದರೆ ಸಕಾಲದಲ್ಲಿ ಬಸ್ ಪಾಸ್ ದೊರೆಯದೇ ಕೆಲವರು ಶಾಲೆಗೆ ಬಾರದೇ ಇರುವ ಕುರಿತು ಇಲಾಖೆಯ ಅಧಿಕಾರಿಗಳು ಪ್ರತಿದಿನ ಹಾಜರಾತಿ ವಿವರದಲ್ಲಿ ಷರಾ ದಾಖಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ರಿಯಾಯ್ತಿ ಪಾಸ್ ದೊರೆಯದೇ ತರಗತಿಗೆ ಗೈರು ಹಾಜರಾಗುವ ಸಮಸ್ಯೆ ಉದ್ಭವಿಸದಂತೆ ಎರಡೂ ಇಲಾಖೆಗಳು ಗಮನಹರಿಸಬೇಕು ಎಂದರು ಸರೇಶ್ ಕುಮಾರ್ ಹೇಳಿದರು.
ಸೇವಾಸಿಂಧು ಮೂಲಕ ಪಾಸ್ ಪಡೆಯುವ ಅರ್ಜಿ ಭರ್ತಿ ಮಾಡುವಾಗ ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆನ್ನು ಕಡ್ಡಾಯಗೊಳಿಸಿರುವುದರಿಂದ ಆಧಾರ್ ಕಾರ್ಡ್ ಮತ್ತು ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಪಾಸ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳೂ ಇವೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಸೈಬರ್ ಕೆಫೆಗಳ ಮೊರೆಹೋಗಬೇಕಿರುವುದರಿಂದ ಸೈಬರ್ ಕೆಫೆಗಳಿಗೆ ಸೇವಾಶುಲ್ಕ ಪಾವತಿಸಬೇಕಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಕೆಲ ಪೋಷಕರು ಹೇಳಿರುವುದರಿಂದ ಇದನ್ನು ಹೇಗೆ ಸರಳೀಕರಿಸಬೇಕೆಂಬುದರ ಕುರಿತೂ ಚಿಂತನೆ ನಡೆಸಬೇಕೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಹಲವು ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಅಪ್‍ಲೋಡ್ ಮಾಡಲಾದ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಪುನಃ ಭರ್ತಿ ಮಾಡಲಾದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅದರೊಂದಿಗೆ ಭೌತಿಕವಾಗಿ ಪಾಸ್ ಕೌಂಟರ್‍ನಲ್ಲಿ ಸಲ್ಲಿಸಬೇಕಾಗಿರುವುದು ಹೆಚ್ಚಿನ ಕೆಲಸದ ಹೊರೆಯಾಗುವುದು ಹಾಗೆಯೇ ಇದು ಅನಗತ್ಯವಾದ ಹಂತವಾಗಿದೆ. ಇದು ಎರಡು ಹಂತದ ಕೆಲಸವಾದ್ದರಿಂದ ಅರ್ಜಿಸಲ್ಲಿಕೆ ಹಂತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕೆಂದು ಸಚಿವರು ಹೇಳಿದರು. ಯಾವುದೇ ಆನ್‍ಲೈನ್ ಸೇವೆಗಳು ಸರಳ/ ಸುಲಭ ಪ್ರಕ್ರಿಯೆ ಹಾಗೂ ಜನಸ್ನೇಹಿಯಾಗಿರಬೇಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ಪಾಸ್ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಂಡು ಸಕಾಲದಲ್ಲಿ ಪಾಸ್ ದೊರೆಯುವಂತೆ ಮಾಡಬೇಕಿರುವುದು ಅಗತ್ಯವಾಗಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ತಮ್ಮ ಕೋರಿಕೆ ಮೇರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆ ಬಸ್‍ಗಳನ್ನು ಒದಗಿಸಿದೆ. ಆದರೆ ಬಸ್‍ಪಾಸ್ ಇಲ್ಲದೇ ಶಾಲೆಗೆ ಹೋಗಿ ಬರಲು ತೊಂದರೆಯಾದರೆ ಬಸ್ ಸೌಲಭ್ಯ ಒದಗಿಸಿಯೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಈ ಸೌಲಭ್ಯದ ಪೂರ್ಣಪ್ರಯೋಜನ ಮಕ್ಕಳಿಗೆ ದೊರೆಯಬೇಕಾದರೆ ಸಕಾಲದಲ್ಲಿ ಪಾಸ್ ದೊರೆಯುವಂತೆ ಮಾಡಬೇಕಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ಪಾಸ್‍ಗೆ 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 8.5 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿ ಪಾಸ್‍ಗಳನ್ನು ವಿತರಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿ ವಿಶ್ವನಾಥ್ ಹೇಳಿದರು.
ಸಕಾಲ ಮಿಷನ್ ನಿರ್ದೇಶಕಿ ಡಾ. ಬಿ.ಆರ್. ಮಮತಾ, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ ಸಕಾಲ ಮಿಷನ್ ಅಧಿಕಾರಿ ವರಪ್ರಸಾದರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.