Home ಬೆಂಗಳೂರು ನಗರ ಮಾರ್ಚ್‌ 2ರಂದು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ

ಮಾರ್ಚ್‌ 2ರಂದು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ

42
0

ಎಸ್‌ಜೆಪಿ ಕಾಲೇಜ್ ಕ್ಯಾಂಪಸ್ ಇನ್ನು ಮುಂದೆ ನಾಲ್ವಡಿ ಕ್ಯಾಂಪಸ್‌: ಡಿಸಿಎಂ

ಬೆಂಗಳೂರು:

ತಂತ್ರಜ್ಞಾನ ಬೆಳೆದಂತೆಲ್ಲ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಎಲ್ಲ ಕ್ರಮಗಳನ್ನು ಸರಕಾರ ಕೈಗೊಂಡಿದ್ದು, ಶೀಘ್ರದಲ್ಲಿಯೇ ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (engineering R&D policy ) ಯನ್ನು ಜಾರಿಗೆ ತರಲಾಗುತ್ತಿದ್ದು, ಮಾರ್ಚ್‌ 2ರಂದು ಘೋಷಣೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ನೂತನ ಪೂರಕ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರೆವೇರಿಸಿ ಮಾತನಾಡಿದ ಅವರು; ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ನಾವು ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ. ಹೀಗಾಗಿ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ. ಆ ನೀತಿ ಬಂದ ನಂತರ ಈ ಕ್ಷೇತ್ರದಲ್ಲೂ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತವೆ ಎಂದರು.

ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ನೂ ಹೆಚ್ಚು ಉತ್ತೇಜನ ನೀಡಬೇಕು. ಸಬ್ಸಿಡಿ, ರಿಯಾಯಿತಿಗಳನ್ನು ಕೊಡುವ ಮೂಲಕ ತಂತ್ರಜ್ಞಾನದಲ್ಲಿ ಬಹುದೊಡ್ಡ ವ್ಯತ್ಯಾಸ ತರುವ ಉದ್ದೇಶ ಸರಕಾರದ್ದು ಎಂದರು ಡಿಸಿಎಂ.

DCM construction of an annex building at the government womens polytechnic college

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕ್ಯಾಂಪಸ್:‌

ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲಾಗುವುದು. ಈ ಕ್ಯಾಂಪಸ್ಸಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳಿವೆ. ಡಿಪ್ಲೊಮೋ, ಎಂಜಿನಿಯರಿಂಗ್‌ ಸೇರಿ ಪ್ರತ್ಯೇಕವಾಗಿ ನಾಲ್ಕಾರು ಸಂಸ್ಥೆಗಳು ಇಲ್ಲಿವೆ. ಈ ಬಗ್ಗೆ ನಾನು, ನಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಜತೆ ಮಾತುಕತೆ ನಡೆಸಿ ಇಷ್ಟೆಲ್ಲ ಸಂಸ್ಥೆಗಳನ್ನು ಒಳಗೊಂಡ ಈ ಕ್ಯಾಂಪಸ್‌ಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸ್ಮರಣಾರ್ಥ ʼನಾಲ್ವಡಿ ಕ್ಯಾಂಪಸ್‌ʼ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಘೋಷಿಸಿದರು.

ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನ:

ಮುಂಗಡ ಪತ್ರದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನವನ್ನು ಕೋರಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈವರೆಗೆ ಒಟ್ಟಾರೆ ಬಜೆಟ್‌ ಗಾತ್ರದಲ್ಲಿ ಶೇ.2ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿತ್ತು. ಈಗ ಶೇ.3.5ರಷ್ಟು ಅನುದಾನ ಕೊಡಿ ಎಂದು ಕೇಳಿದ್ದೇವೆ. ಶಿಕ್ಷಣಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಸರಕಾರ ಚೌಕಾಸಿ ಮಾಡುವುದಿಲ್ಲ ಎಂದು ಡಿಸಿಎಂ ಹೇಳಿದರು.

DCM construction of an annex building at the government womens polytechnic college2

ಡಿಪ್ಲೊಮಾ ಪಠ್ಯ ಪರಿಷ್ಕರಣೆ:

ಗುಣಮಟ್ಟದ ಬೋಧನೆ-ಕಲಿಕೆಯ ಗುರಿಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಂತ್ರಿಕ ಶಿಕ್ಷಣ ಮುಗಿದ ಕೂಡಲೇ ಉದ್ಯೋಗ ಸಿಗುವಂಥ ವ್ಯವಸ್ಥೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಈಗಾಗಲೇ ಡಿಪ್ಲೊಮಾ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. ಆ ಪಠ್ಯವನ್ನು ರಾಷ್ಟ್ರೀಯ ಕೌಶಲ್ಯ ಮಾನದಂಡಕ್ಕೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಟೆಕ್ನಾಲಜಿ ಬೆಳೆದ ಹಾಗೆಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳ ಉನ್ನತೀಕರಣವನ್ನೂ ಕೈಗೊಳ್ಳಬೇಕು. ಹಾಗೆಯೇ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಸಂಸ್ಥೆಗಳು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಡಿಸಿಎಂ ಸಲಹೆ ಮಾಡಿದರು.

ಬೋಧಕರಿಗೆ ಎಲ್ಲ ಸಹಕಾರ:

ಗುಣಮಟ್ಟದ ಕಲಿಕೆಯ ಬಗ್ಗೆ ಮಾತನಾಡುವ ನಾವು ಗುಣಮಟ್ಟದ ಬೋಧನೆಯ ಬಗ್ಗೆಯೂ ಮಾತನಾಡಬೇಕು. ಹಾಗೆ ಆಗಬೇಕಾದರೆ, ಬೋಧಕರ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕು. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ವೇತನ ಪರಿಷ್ಕರಣೆ ಮಾಡಲಾಯಿತು. ಇನ್ನೂ ಅನೇಕ ವಿಷಯಗಳಲ್ಲಿ ಬೋಧಕರಿಗೆ ಪೂರಕವಾಗಿ ಸರಕಾರ ಕೆಲಸ ಮಾಡಿದೆ ಎಂದರು ಡಿಸಿಎಂ.

ವಿದ್ಯಾರ್ಥಿಗಳಿಗೆ ಡಿಸಿಎಂ ಕಿವಿಮಾತು:

ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಡಿಸಿಎಂ ಅವರು, “ಟೆಕ್ನಾಲಜಿ ಸುಧಾರಣೆ ಆದಂತೆಲ್ಲ ಕಲಿಕೆಯ ಮಾದರಿಯೂ ಬದಲಾಗುತ್ತಲೇ ಇರುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಂಡು ವ್ಯಾಸಂಗ ಮಾಡಬೇಕು. ಕಾಲೇಜುಗಳಲ್ಲಿ ಪ್ರತಿಯೊಂದನ್ನು ಸ್ಫೂನ್‌ ಫೀಡಿಂಗ್‌ ಮಾಡಲಾಗದು. ಸ್ವಯಂ ಕಲಿಕೆಯ ಸಾಮರ್ಥ್ಯವನ್ನು ಎಲ್ಲರೂ ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಗಿಟ್ಟಿಸಬೇಕಾದರೆ ಇಂಥ ಶ್ರಮ ಅಗತ್ಯ. ಉನ್ನತ ಶಿಕ್ಷಣದಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು” ಎಂದರು.

ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ ಸಂಸ್ಥೆಗೆ ಅವಿಚ್ಛಿನ್ನ ಇತಿಹಾಸವಿದೆ. ಇಡೀ ಏಷ್ಯಾದಲ್ಲಿ ಮಹಿಳೆಯರಿಗಾಗಿ ಆರಂಭವಾದ ಎರಡನೇ ಪಾಲಿಟೆಕ್ನಿಕ್‌ ಇದು. ದಕ್ಷಿಣ ಭಾರತದಲ್ಲಿ ಮೊದಲನೆಯದು. ಐತಿಹಾಸಿಕ ಮಹತ್ವ ಹೊಂದಿರುವ ಶ್ರೇಷ್ಠ ಶಿಕ್ಷಣ ಸಂಸ್ಥೆ. ಇಂಥ ಸಂಸ್ಥೆಯ ಪ್ರಾಂಶುಪಾಲರಾದ ಸಲ್ಮಾ ಅವರು ನಾಳೆ (ಫೆ.28) ನಿವೃತ್ತರಾಗುತ್ತಿದ್ದಾರೆ. ಅವರ ಗೌರವಾರ್ಥ ಇಂದೇ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು ಡಿಸಿಎಂ.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌, ನಿರ್ದೇಶಕ ತಳವಾರ, ಪ್ರಾಂಶುಪಾಲರಾದ ಸಲ್ಮಾ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here