ಬೆಂಗಳೂರು:
ನಾಡಿನ ಹಿರಿಯ ವಿದ್ಯಾಂಸ, ವಿಚಾರವಾದಿ, ಆಧ್ಯಾತ್ಮಿಕ ಚಿಂತಕ ಬನ್ನಂಜೆ ಗೋವಿಂದಾಚಾರ್ಯ ಉಡುಪಿಯ ಅಂಬಲಪಾಡಿಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಶಾಸ್ತ್ರ ಬೋಧನೆ, ವಿಚಾರವಾದದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅವರು ನೈಜ ಪ್ರವಚನಕಾರರಾಗಿ ಗುರುತಿಸಿಕೊಂಡಿದ್ದರು. ಆದ್ಯಾತ್ಮಿಕ ಪ್ರವಚನಗಳ ಮೂಲಕ ನಾಡಿನ ಗಮನ ಸೆಳೆದಿದ್ದರು.
ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದ ಅವರು ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿದ್ದರು. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರು ಶಿವಳ್ಳಿಯ ಮಾಧ್ವಬ್ರಾಹ್ಮಣ ಸಂಪ್ರದಾಯಿವನ್ನು ಅನುಸರಿಸುತ್ತಿದ್ದರು.
1936ರಲ್ಲಿ ಜನಿಸಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರು, ಸಂಸ್ಕೃತದ ರಾಮಬಟ್ಟರ ಕಾದಂಬರಿ, ಕಾಳೀದಾಸನ ಶಾಕುಂತಲ, ಶೂದ್ರಕನ ಮೃಚ್ಛಿಕಟಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಹಲವು ಆಧ್ಯಾತಿಕ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
ಖ್ಯಾತ ಚಲನಚಿತ್ರನಟ, ದಿವಂಗತ ವಿಷ್ಣುವರ್ಧನ್ ಅವರಿಗೆ ಬನ್ನಂಜೆ ಗೊವಿಂದಾಚಾರ್ಯ ಧಾರ್ಮಿಕ ಗುರುವಾಗಿದ್ದರು.
ಮುಖ್ಯಮಂತ್ರಿ ಸಂತಾಪ
ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಪಾರಂಗತರಾಗಿದ್ದ ಬನ್ನಂಜೆಯವರ ನಿಧನದಿಂದ ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. (2/2)
— B.S. Yediyurappa (@BSYBJP) December 13, 2020
ವೇದ, ಪುರಾಣಗಳ ಕುರಿತ ಅವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತ ಗೊಳಿಸುವಂತಿದ್ದವು. ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆ ಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.