ಬೆಂಗಳೂರು:
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸೇರಿ ಹಲವು ದಂಧೆಯಲ್ಲಿ ತೊಡಗಿದ್ದ ಮಗನ ಮಾತು ಕೇಳಿ ತಾಯೊಯೊಬ್ಬಳು ತಾನು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮನೆಯಿಂದ ಲಕ್ಷಾಂತರ ರೂಪಾಯಿ ಚಿನ್ನಾಭರಣ, ನಗದು ಕಳ್ಳತನ ಮಾಡಿ ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಕೆ.ಜಿ.ಹಳ್ಳಿಯ ಮೇರಿ ಆಲಿಸ್ ಹಾಗೂ ಪುತ್ರ ಮೈಕೆಲ್ ವಿನ್ಸಂಟ್ ಬಂಧಿತ ತಾಯಿ ಮತ್ತು ಮಗ.
ಬಾಲಿವುಡ್ ನಟ ಬೋಮನ್ ಇರಾನಿ ಅವರ ಸಹೋದರಿ ಖುರ್ಷೀದ್ ಇರಾನಿ ಕುಟುಂಬ ಹಲಸೂರಿನ ಅಬ್ಬಾಸ್ ಅಲಿ ರಸ್ತೆ ಬಳಿ ವಾಸವಿದೆ. ಅವರ ಮನೆಯಲ್ಲಿ 20 ವರ್ಷಗಳಿಂದ ಮೇರಿ ಆಲಿಸ್ ಮನೆಕೆಲಸ ಮಾಡಿಕೊಂಡು ಮಾಲಕಿಯ ವಿಶ್ವಾಸ ಗಳಿಸಿಕೊಂಡಿದ್ದಳು.
ತನ್ನ ತಾಯಿ ಶ್ರೀಮಂತರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ವಿಚಾರ ಅರಿತಿದ್ದ ಆರೋಪಿ ಪುತ್ರ ಮೈಕೆಲ್, ಮಾಲೀಕರ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡುವಂತೆ ತಾಯಿಗೆ ಪ್ರಚೋದಿಸುತ್ತಿದ್ದ. ಪ್ರಾರಂಭದಲ್ಲಿ ಮಗನಿಗೆ ಬೈದು ಬುದ್ಧಿವಾದ ಹೇಳಿದ್ದ ತಾಯಿ, ಕ್ರಮೇಣ ಮಗನ ಹಠಕ್ಕೆ ಮನಸೋತು ಕಳ್ಳತನ ಮಾಡಲು ಒಪ್ಪಿಕೊಂಡು ಕೃತ್ಯಕ್ಕೆ ಇಳಿದಿದ್ದಳು.
ಒತ್ತಡಕ್ಕೆ ಸಿಲುಕಿ ಮೇರಿ ಕಳೆದ ಎರಡು ವರ್ಷಗಳಿಂದ ಖುರ್ಷೀದ್ ಇರಾನಿ ಅವರ ಮನೆಯಿಂದ 700 ಗ್ರಾಂನ 7 ಚಿನ್ನದ ಬಿಸ್ಕತ್ಗಳು, 85 ಲಕ್ಷ ರೂ. ನಗದು, 11 ಲಕ್ಷ ರೂ. ಮೌಲ್ಯದ 15 ಸಾವಿರ ಯುಎಸ್ಐ ಕರೆನ್ಸಿ ಹಾಗೂ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಳು. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲಸೂರು ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ನಾಪತ್ತೆಯಾಗಿದ್ದ ಮನೆ ಕೆಲಸದಾಕೆ ಮೇರಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಗನಿಗಾಗಿ ಕಳ್ಳತನ ಮಾಡಿದ್ದೆ ಎಂದು ಮೇರಿ ತಪ್ಪೊಪ್ಪಿಕೊಂಡಿದ್ದಾಳೆ.
ಮತ್ತೊಂದೆಡೆ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಮೈಕೆಲ್, ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂವೆಲ್ಲರಿ ಶಾಪ್ವೊಂದರ ಬಳಿ ಡಿ.2 ರಂದು ಕದ್ದ ಮಾಲನ್ನು ಮಾರಾಟ ಮಾಡಲು ಮುಂದಾದಾಗ, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 2 ಚಿನ್ನದ ಬಿಸ್ಕತ್ ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಕಳ್ಳತನ ಮಾಡಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಮೇರಿ ತನ್ನ ಮಗನಿಗೆ ತಂದು ಕೊಟ್ಟಿದ್ದಾಳೆ. ಈ ಹಣವನ್ನು ಮೈಕೆಲ್, ಐಪಿಎಲ್ ಬೆಟ್ಟಿಂಗ್ ಆಡಿ ಕಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಕೆ.ಜಿ.ಹಳ್ಳಿಯ ಮೇರಿ ಆಲಿಸ್ ಹಾಗೂ ಪುತ್ರ ಮೈಕೆಲ್ ವಿನ್ಸಂಟ್ ಎಂಬ ತಾಯಿ-ಮಗನನ್ನು ಬಂಧಿಸಿ ಬಾಲಿವುಡ್ ಹಿರಿಯ ನಟ ಬೊಮನ್ ಇರಾನಿ ಸಹೋದರಿ ಖುರ್ಷೀದ್ ಇರಾನಿ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನವನ್ನು ಭೇದಿಸಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.