ಬೆಂಗಳೂರು:
ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಒಂದೇ ಕಡೆ ಶಿಕ್ಷಣ ಸಿಗಬೇಕೆನ್ನುವ ಉದ್ದೇಶದಿಂದ ಮಲ್ಲೇಶ್ವರಂ 13ನೇ ಅಡ್ಡ ರಸ್ತೆಯಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಮಹಿಳಾ ಘಟಕವು ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ‘ಮಹಿಳೆಯರ ಸಮಗ್ರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಹೀಗಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ 30 ಸಾವಿರ ಮನೆಗಳಿಗೆ ಹೊಸ ನಲ್ಲಿ ಸಂಪರ್ಕ ಕೊಡಲಾಗುತ್ತಿದೆ. ಈ ಪೈಕಿ ಈಗಾಗಲೇ 15 ಸಾವಿರ ಮನೆಗಳಿಗೆ ಕೊಳಾಯಿ ಸಂಪರ್ಕ ಒದಗಿಸಲಾಗಿದೆ’ ಎಂದರು.
ಬೀದಿ ದೀಪ, ಗುಣಮಟ್ಟದ ರಸ್ತೆ, ವೈಜ್ಞಾನಿಕ ಒಳಚರಂಡಿ, ಭೂಮಿಯೊಳಗೆ ವಿದ್ಯುತ್ ತಂತಿ, ಓಎಫ್ಸಿ ಕೇಬಲ್, ಕೊಳವೆ ಮಾರ್ಗ ಇವೆಲ್ಲವೂ ಮಲ್ಲೇಶ್ವರಂ ಕ್ಷೇತ್ರದಲ್ಲಿ ಸಾಕಾರಗೊಳ್ಳುತ್ತಿವೆ. ಜತೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ 250 ಕಿ.ಮೀ. ರಸ್ತೆಯನ್ನೂ ಡಾಂಬರೀಕರಣ ಮಾಡಲಾಗುವುದು ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ 7 ಸಾವಿರ ಹಳೆಯ ಮ್ಯಾನ್ ಹೋಲುಗಳಿದ್ದು, ಎಲ್ಲವೂ ಶಿಥಿಲವಾಗಿವೆ. ಮೊದಲ ಹಂತದಲ್ಲಿ 4,500 ಮ್ಯಾನ್ ಹೋಲುಗಳನ್ನು ಬದಲಿಸಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಪೋಲನ್ನು ಶೇ 45ರಿಂದ ಶೇ 25ಕ್ಕೆ ಇಳಿಸಲಾಗಿದೆ. ಇದನ್ನು ಮುಂಬರುವ ದಿನಗಳಲ್ಲಿ ಶೇ.10ಕ್ಕೆ ತರಲಾಗುವುದು. ಅಲ್ಲದೆ, ಕುಡಿವ ನೀರಿಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮಹಿಳೆಯರಿಗೆ ಆರೋಗ್ಯ ಸೇವೆಗಳು ಸರಿಯಾಗಿ ಸಿಗಬೇಕೆಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಧಾರಿಸಲಾಗಿದೆ. ಕ್ಷೇತ್ರದ ಮಹಿಳೆಯರು ಮುಂದಿನ 30 ವರ್ಷಗಳ ಕಾಲ ಯಾವುದಕ್ಕೂ ಯೋಚಿಸಬೇಕಾಗಿಲ್ಲ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿಯರಾದ ಕಾವೇರಿ ಕೇದಾರನಾಥ, ಹೇಮಲತಾ, ಆಶಾ, ಶಶಿಕಲಾ, ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯಂ, ವೇದ ವಿದ್ವಾಂಸ ನರಸಿಂಹನ್ ಮುಂತಾದವರು ಇದ್ದರು.