ಬೆಂಗಳೂರು:
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಕೆಲವು ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಹಲವೆಡೆ ಜನಜೀವನ ಸಹಜ ಸ್ಥಿತಿಯಲ್ಲಿದೆ. ಆದರೆ ನಗರದ ವಿವಿಧ ಮೂಲೆಗಳಿಂದ ಸಾರ್ವಜನಿಕರು ಪ್ರತಿಭಟನೆ ನಡೆಸಲು ಮೈಸೂರು ಬ್ಯಾಂಕ್ ಮತ್ತು ಟೌನ್ ಹಾಲ್ ಕಡೆಗೆ ಬರುತ್ತಿರುವ ದೃಶ್ಯ ಕಂಡುಬಂದಿದೆ. ಎಲ್ಲೆಡೆ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ದಾವಣಗೆರೆಯಲ್ಲಿ ಜಗಳೂರು ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿಯಲ್ಲಿಯೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚೆನ್ನಮ್ಮ ವೃತ್ತದಲ್ಲಿ ನೂರರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾನೂನನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಸಾರಿಗೆ ಬಸ್ ಸ್ಥಗಿತಗೊಂಡಿದ್ದು, ಖಾಸಗಿ ವಾಹನ ಕೂಡ ಸ್ತಬ್ಧಗೊಂಡಿದೆ.
ಮೈಸೂರಿನಲ್ಲಿಯೂ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ವಾಹನಗಳ ಸಂಖ್ಯೆ ವಿರಳವಾಗಿದೆ. ಕೆಲವೆಡೆ ಅಂಗಡಿಗಳು ತೆರೆದಿದ್ದರೂ ರೈತರು ಅಂಗಡಿ ಮಾಲೀಕರ ಮನವೊಲಿಸಿ ಬಂದ್ ಮಾಡಿಸುತ್ತಿದ್ದ ದೃಶ್ಯ ಕಂಡುಬಂತು.
ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ, ಆನೇಕಲ್ ನ ಮಾರ್ಕೆಟ್ ಅನ್ನು ಬಂದ್ ಮಾಡಲಾಗಿದೆ. ರಾಜ್ಯದ ಅತಿ ದೊಡ್ಡ ಹಣ್ಣು ಹಂಪಲು ಮಾರ್ಕೆಟ್ ಆಗಿರುವ ಇಲ್ಲಿ ಸುಮಾರು 400ಕ್ಕೂ ಅಧಿಕ ಮಳಿಗೆಗಳಿಗೆ. ವಿವಿಧ ರಾಜ್ಯಗಳಿಂದ ಹಣ್ಣುಗಳೊಂದಿಗೆ ಬಂದ ಲಾರಿಗಳು ಅನ್ ಲೋಡ್ ಮಾಡದೆ ನಿಂತಿದ್ದ ದೃಶ್ಯಗಳು ಕಂಡುಬಂದವು. ಅತ್ತಿಬೆಲೆ ಹೆದ್ದಾರಿಯನ್ನು ಬಂದ್ ಮಾಡಲು ರೈತಲು ಮುಂದಾಗಿದ್ದಾರೆ.
ಕಲಬುರಗಿಯಲ್ಲಿಯೂ ಬಂದ್ ಗೆ ಬೆಂಬಲ ದೊರೆತಿದ್ದು, ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೋಲಾರದಲ್ಲಿಯೂ ರೈತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಮೇಲೆ ಉಪಹಾರ ಸೇವಿಸಿ ಪ್ರತಿಭಟನೆ ನಡೆಸಿದರು. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ರೈತರು ಬೆಳಗ್ಗೆಯೇ ಪ್ರತಿಭಟನೆಗೆ ಇಳಿದಿದ್ದು, ರೈತರು ಉರುಳು ಸೇವೆ ಮಾಡಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಉಳಿದಂತೆ ಹಾಸನ, ಮಂಡ್ಯ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜಸ್ಥಿತಿಯಲ್ಲಿದ್ದರೂ ಪ್ರತಿಭಟನೆ ನಡೆಯುತ್ತಿವೆ.