ಬೆಂಗಳೂರು:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಇಂದು ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಹಿರಿಯ ನಾಯಕರಾದ ಡಾ.ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಶಾಸಕರು ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಕಾನೂನುಗಳಿಗೆ ತಿದ್ದುಪಡಿ ತಂದು ಮೂಲ ಕಾನೂನುಗಳ ಉದ್ದೇಶವನ್ನು ಬದಲಾಯಿಸಲಾಗಿದೆ. ರಾಜ್ಯದಲ್ಲಿಯೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತರಲಾಗಿದೆ. ಕೃಷಿ ಸಂಬಂಧಿತ ತಿದ್ದುಪಡಿ ಕಾನೂನುಗಳನ್ನು ರೈತರು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ರೈತರ ಒತ್ತಾಯ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಮುಂತಾದ ಕಾರ್ಪೋರೇಟ್ ಸಂಸ್ಥೆಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಬಂಡವಾಳಿಶಾಹಿಗಳಿಗೆ ನೆರವು ನೀಡಲು ಕೃಷಿ ಕ್ಷೇತ್ರವನ್ನು ನಾಶಮಾಡಲು ಹೊರಟಿದ್ದಾರೆ. ರೈತರ ಹೋರಾಟ ನ್ಯಾಯಯುತವಾಗಿದೆ. ದೇಶದ ಅನೇಕ ರಾಜಕೀಯ ಪಕ್ಷಗಳು ಕೂಡ ರೈತರ ಹೋರಾಟವನ್ನು ಬೆಂಬಲಿಸಿವೆ. ಆದರೂ ಕೇಂದ್ರ ಸರ್ಕಾರ ನೆಪ ಮಾತ್ರಕ್ಕೆ ರೈತರೊಂದಿಗೆ ಮಾತುಕತೆ ನಡೆಸಿದೆ. ರೈತರ ಬೇಡಿಕೆ ಇರುವುದು ಮಾರಕವಾಗಿರುವ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದಾಗಿದೆ. ಎಪಿಎಂಸಿ ಮಾರುಕಟ್ಟೆ ನಾಶವಾಗಲಿದೆ ಎಂಬುದು ರೈತರ ಆತಂಕವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯಾವಾಗಲೂ ಕಾನೂನುಗಳು ಸಮಾಜದ ಬೆಳವಣಿಗೆಗೆ ಪರಿವರ್ತನೆಗೆ ಪೂರಕವಾಗಿರಬೇಕು. ಸಮಾಜಕ್ಕೆ ಒಳಿತನ್ನು ತರುವಂತಿರಬೇಕು. ಆದರೆ ಈ ಕಾಯ್ದೆಗಳು ರೈತ ಸಮುದಾಯಕ್ಕೆ ವಿರುದ್ಧವಾದುದು. ಇಡೀ ಕೃಷಿ ಕ್ಷೇತ್ರ ನಾಶ ಮಾಡಲು ಹೊರಟಿದ್ದಾರೆ. ಸಂಸತ್ ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸಿವೆ. ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿವೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಕರ್ನಾಟಕದಲ್ಲಿಯೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ. ಸದನ ನಡೆಯುತ್ತಿರುವುದರಿಂದ ಸಾಂಕೇತರಿಕವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನ್ಯಾಯಕ್ಕಾಗಿ ಹೋರಾಟ ಮಾಡುವಾಗ ಅದನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸಿದರೆ ಅದಕ್ಕೆ ಹೆದರುವ ಅಗತ್ಯವಿಲ್ಲ. ಕಪ್ಪುಪಟ್ಟಿ ಧರಿಸಿ ಇಂದಿನ ಸದನದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.