ಮಂಡ್ಯ:
ತಮಿಳುನಾಡಿಗೆ ಸೆಪ್ಟೆಂಬರ್ 2ರಿಂದ ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮಧ್ಯಂತರ ಆದೇಶ ನೀಡಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆಯ ಮುಖ್ಯ ದ್ವಾರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇಂದು ಸರ್ಕಾರದ ವಿರುದ್ಧ ಧರಣಿ ನಡೆಸಿದರು. ರಾಜ್ಯದಲ್ಲಿನ ನೀರಿನ ಅಭಾವವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ರೈತರು ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರಕ್ಕೆ ಇಲ್ಲಿನ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಕೈಗಾರಿಕೆ ಇಲಾಖೆ ಸಚಿವ ಎಂ.ಬಿ ಪಾಟೀಲ್ ಎಎನ್‌ಐಗೆ ಹೇಳಿಕೆ ನೀಡಿದ್ದು, ಸಮಿತಿಯ ಆದೇಶವನ್ನು ಜಾರಿಗೊಳಿಸುವುದು ರಾಜ್ಯಕ್ಕೆ ತುಂಬಾ ಕಷ್ಟಕರವಾಗಿದೆ. ನಮ್ಮಲ್ಲಿ ನೀರಿಲ್ಲ. ಸಮಿತಿ ಆದೇಶ ಜಾರಿ ಮಾಡುವುದು ತುಂಬಾ ಕಷ್ಟ. ಹಾಗಾಗಿ ನಾವು ಕಾನೂನು ಮಾರ್ಗ ಹಿಡಿದಿದ್ದೇವೆ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಎತ್ತಲಿದ್ದೇವೆ ಎಂದರು.
ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ನೀರಿನ ಲಭ್ಯತೆ ಕುರಿತಂತೆ ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ವಿಚಾರಣೆ ಮುಗಿಯಲಿ, ನಮ್ಮ ವಾದ ಮಂಡಿಸಿ ರಾಜ್ಯದ ಹಿತ ಕಾಪಾಡುತ್ತೇವೆ. ಸುಪ್ರೀಂಕೋರ್ಟ್ ನಿಂದ ತೀರ್ಪು ಬರಲಿ, ನಂತರ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.