ಬೆಂಗಳೂರು:
ರಾಜ್ಯದಲ್ಲಿ ಮಾದಕ ವಸ್ತುಗಳ ವ್ಯಸನದಿಂದ ಜನರನ್ನು ಮುಕ್ತಿಗೊಳಿಸಲು ಶ್ರೀ ಕ್ಷೇತ್ರದ ಧರ್ಮಸ್ಥಳದ ಕಾಣಿಕೆ ಅನನ್ಯವಾದದ್ದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಅಖಿಲ ಕರ್ನಾಟಕ ಜನ ಜಾಗೃತಿ ಟ್ರಸ್ಟ್ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಮಾದಕ ವಸ್ತು ಹಾಗೂ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಹೊರ ತರಲಾದ ಕರಪತ್ರಗಳನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಡಿಸಿಎಂ ಮಾತನಾಡಿದರು.
ಈಗಾಗಲೇ ಧಾರ್ಮಿಕ, ಶೈಕ್ಷಣಿಕ ರಂಗವೂ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಯುತ್ತಿರುವುದರಿಂದ ಆ ದಿಕ್ಕಿನ ಪ್ರಯತ್ನಗಳಿಗೆ ಹೆಚ್ಚು ಬಲ ಬರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಡಾ.ಹೆಗ್ಗಡೆ ಅವರ ಮಾರ್ಗದರ್ಶನ ಬಹಳ ಮುಖ್ಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮಾದಕ ವಸ್ತುಗಳ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯವರ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
— Dr. Ashwathnarayan C. N. (@drashwathcn) June 25, 2021
ಸ್ವಾಸ್ಥ್ಯ ಸಮಾಜಕ್ಕಾಗಿ ಪೂಜ್ಯರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. pic.twitter.com/977uyk6Gmj
ಮಾದಕ ವಸ್ತುಗಳಿಗೆ ದಾಸರಾಗುವುದು ಎಂದರೆ ಜೀವನವನ್ನು ನಾಶ ಮಾಡಿಕೊಳ್ಳುವುದಷ್ಟೇ. ಯಾವುದೇ ಕಾರಣಕ್ಕೂ ಯುವಜನರು ಇಂಥ ದುಶ್ಚಟಗಳಿಗೆ ದಾಸರಾಗಬಾರದು. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಅತ್ಯುತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ಕರಪತ್ರಗಳು ಹೆಚ್ಚೆಚ್ಚು ಜಾಗೃತಿ ಮೂಡಿಸಲಿ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಅಖಿಲ ಕರ್ನಾಟಕ ಜನ ಜಾಗೃತಿ ಟ್ರಸ್ಟ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.