ಬೆಂಗಳೂರು:
ಡ್ರಗ್ಸ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಡ್ರಗ್ಸ್ ಮಾರಾಟ ಜಾಲವನ್ನು ಮೆಟ್ಟಿ ನಿಲ್ಲುವುದೇ ನಮ್ಮ ಸಂಕಲ್ಪ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾರ್ಕ್ ವೆಬ್ ಮೂಲಕ ಸರಬರಾಜಾಗುತ್ತಿದ್ದ ಮಾದಕ ವಸ್ತುಗಳನ್ನು ನಮ್ಮ ಪೊಲೀಸರು ನಿಯಂತ್ರಿಸಿದ್ದಾರೆ. ಡಾರ್ಕ್ ವೆಬ್ ಅಪರಾಧ ಪತ್ತೆಯಿಂದ ಹಲವಾರು ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಅದರ ಆಧಾರದ ಮೇಲೆ ಹಲವಾರು ದಾಳಿಗಳು ನಡೆದಿವೆ. ಅಂತರಾಷ್ಟ್ರೀಯ ಮಟ್ಟದ ಪ್ಲೇಯರ್ ಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು. ಡ್ರಗ್ಸ್ ವಿರುದ್ಧದ ್ಮ ಹೋರಾಟ ಮುಂದುವರಿಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಪೊಲೀಸರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ
ಡ್ರಗ್ಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಕರ್ನಾಟಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಡ್ರಗ್ ವಿರೋಧಿ ಕಾರ್ಯಾಚರಣೆಯಿಂದ ಬೇರೆ ಎಲ್ಲ ತನಿಖಾ ಏಜೆನ್ಸಿಗಳು ಜಾಗೃತವಾದವು ಅನ್ನುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇದುವರೆಗೆ ಬೇರೆ ಏಜೆನ್ಸಿಗಳು ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದವು. ಆದರೆ ಈಗ ಕರ್ನಾಟಕ ಪೊಲೀಸರು ಅಪರಾಧ ಪತ್ತೆ ವಿಚಾರದಲ್ಲಿ ಬೇರೆ ಸಂಸ್ಥೆಗಳನ್ನು ಜಾಗೃತಗೊಳಿಸುತ್ತಿವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು.
50 ಕೋಟಿ ಮೊತ್ತದ ಮಾದಕವಸ್ತುಗಳ ನಾಶ
2020 21 ನೇ ಸಾಲಿನಲ್ಲಿ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿ ರುವ 3000 ಕೆಜಿ ಗಿಂತಲೂ ಹೆಚ್ಚು ತೂಕದ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ನಾಶಪಡಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಅಪಾರ ಪ್ರಮಾಣದ ಜನರ ಆರೋಗ್ಯವನ್ನು ಹಾಳು ಮಾಡುತ್ತಿದ್ದವು. ಆ ಅಪಾಯವನ್ನು ನಮ್ಮ ಪೊಲೀಸರು ತಪ್ಪಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೊಮ್ಮಾಯಿ ಪೊಲೀಸರಿಗೆ ಮಾದಕವಸ್ತು ತಡೆ ಮತ್ತು ನಾಶಪಡಿಸುವ ಕುರಿತು ಪ್ರಮಾಣ ವಚನ ಬೋಧಿಸಿದರು.
ಇದುವರೆಗಿನ ಡ್ರಗ್ಸ್ ವಿರುದ್ಧದ ಹೋರಾಟದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದ ವಿವಿಧ ರೀತಿಯ ಮಾದಕ ವಸ್ತುಗಳನ್ನು ಒಂದೇ ವರ್ಷದಲ್ಲಿ ವಶಪಡಿಸಿಕೊಂಡಿರುವುದು ಐತಿಹಾಸಿಕ. ಇದು ಕರ್ನಾಟಕ ಪೊಲೀಸರ ಸಣ್ಣ ಸಾಧನೆಯೇನಲ್ಲ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ದಾಳಿಗಳು ನಡೆದವು. ಇದರ ಜಾಡು ಹಿಡಿದು ರಾಜ್ಯದ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಮಾದಕ ವಸ್ತುಗಳ ಜಾಲವನ್ನು ನಮ್ಮ ಪೊಲೀಸರು ಭೇದಿಸಿದರು. ಅದೆಷ್ಟೋ ಯುವಕರು, ಕುಟುಂಬಗಳು ಮಾದಕ ವಸ್ತುಗಳಿಂದ ಹಾಳಾಗುವುದನ್ನು ತಪ್ಪಿಸಿದರು ಎಂದು ಬಸರಾಜ್ ಬೊಮ್ಮಾಯಿ ಹೇಳಿದರು.