ಬೆಂಗಳೂರು:
ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 8 ರಂದು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು.
ಬರೋಬ್ಬರಿ 85 ದಿನಗಳ ಕಾಲ ಜೈಲಿನಲ್ಲಿದ್ದ ಸಂಜನಾ ರ ಜಾಮೀನು ಅರ್ಜಿಯ ವಿಚಾರಣೆ ಗುರುವಾರವೂ ನಡೆದು, ಶುಕ್ರವಾರಕ್ಕೆ ಮುಂದೂಡಲಾಗಿತ್ತು.
ಹಲವು ಪ್ರಯತ್ನಗಳ ಬಳಿಕ ಇಂದು ಸಂಜನಾ ಗೆ ಷರತ್ತುಬದ್ಧ ಜಾಮೀನು ದೊರೆತಿದೆ. 3 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಸ್ಯೂರಿಟಿ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯನಾಶ ಮಾಡುವಂತಿಲ್ಲ. ತನಿಖೆಗಾಗಿ ಪೊಲೀಸರಿಗೆ ಸಹಕರಿಸಬೇಕು ಹಾಗೂ ತಿಂಗಳಿಗೆ ಎರಡು ದಿನ ಹಾಜರಿ ಪುಸ್ತಕಕ್ಕೆ ಸಹಿ ಹಾಕಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಿಂತಲೂ ಕೆಲ ದಿನ ಮುಂಚೆ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಈ ವರೆಗೆ ಜಾಮೀನು ದೊರೆತಿಲ್ಲ.
ರಾಗಿಣಿ ದ್ವಿವೇದಿಯ ಬಂಧನವಾದ ಕೆಲವು ದಿನಗಳ ಬಳಿಕ ನಟಿ ಸಂಜನಾ ಬಂಧನವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧದಲ್ಲಿದ್ದ ಸಂಜನಾ ಗಲ್ರಾನಿಗೆ ಇದೀಗ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.