ಬೆಂಗಳೂರು:
ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಪರವಾಗಿ ವಕೀಲ ಜಗದೀಶ್ ದೂರು ನೀಡಿದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿಡಿಯಲ್ಲಿದ್ದ ಯುವತಿಯ ಲಿಖಿತ ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಐಪಿಸಿ ಸೆಕ್ಷನ್ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ.
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿಗಳು ಸಾಹುಕಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿದ್ದರು ಎಂದು ಆರೋಪಿಸಿರುವ ಯುವತಿ ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇಂದು ಮಧ್ಯಾಹ್ನ ಯುವತಿ ಪರವಾಗಿ ವಕೀಲ ಕೆಎನ್ ಜಗದೀಶ್ ಕುಮಾರ್ ಅವರು ಸ್ವತಃ ಯುವತಿ ಕೈಯಿಂದ ಬರೆದುಕೊಟ್ಟ ದೂರಿನ ಪ್ರತಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಿದರು. ದೂರನ್ನು ಪರಿಶೀಲಿಸಿದ ಆಯುಕ್ತರು, ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವರ್ಗಾಯಿಸಿದ್ದರು.
ನಾನು ಪೊಲೀಸರಿಗೆ ದೂರು ನೀಡದಂತೆ ತಡೆಯಲು ಯತ್ನಿಸಿದರು ಮತ್ತು ನನ್ನ ಹತ್ಯೆಗೆ ರಮೇಶ್ ಜಾರಕಿಹೊಳಿ ಅವರು ಮುಂದಾಗಿದ್ದರೂ ಎಂದು ಯುವತಿ ಗಂಭೀರ ಆರೋಪ ಮಾಡಿದ್ದು ಇದೇ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಯುವತಿ ದೂರಿನಲ್ಲಿ ಆಧಾರದ ಮೇಲೆ ಲೈಂಗಿಕವಾಗಿ ದುರ್ಬಳಕೆ, ಕೊಲೆ ಯತ್ನ, ಆತ್ಮಹತ್ಯೆಗೆ ಪ್ರಚೋದನೆ, ವಂಚನೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಬಹುದಾಗಿದೆ.
ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ವಿಡಿಯೋ ಕರೆ ಮಾಡಿ ಅಶ್ಲೀಲ ಮಾತು. ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೇ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿಡಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದ್ದು, ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದು, ನಂತರ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆಯಿಂದ ಮಾತನಾಡಲು ಆರಂಭಿಸಿದರು. ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿದ್ದು, ನನಗೆ ತುಂಬಾ ಖುಷಿ ಆಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಆಗಾಗ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಬದಲಾಗಿ ನೀನು ನನಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು. ಕೆಲಸ ಕೊಡಿಸುತ್ತಾರೆ ಎಂದು ನಂಬಿದ್ದ ನನ್ನ ಬಳಿ ಕೊಡಲು ಲಕ್ಷಾಂತರ ಹಣವಿಲ್ಲದೇ ಇರುವುದನ್ನು ಮುಂಚೆಯೇ ತಿಳಿದುಕೊಂಡು ಹಣದ ಬದಲು ಅವರ ಜೊತೆಗೆ ಸಹಕರಿಸಿ ಖುಷಿ ನೀಡಬೇಕು ಎಂದು ಕೇಳಿದ್ದರಿಂದ ನಂಬಿ ಅವರು ಕೇಳಿದಂತೆ ನಡೆದುಕೊಂಡು ಬಂದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿದ್ದೇನೆಂದು ವಿಡಿಯೋ ಕರೆ ಮಾಡಿ ನಗ್ನಳಾಗಿ ದೇಹದ ಅಂಗಾಂಗ ತೋರಿಸಲು ಹೇಳಿದರು. ಅವರು ಪ್ರಭಾವಿ ಆಗಿದ್ದರಿಂದ ಹೇಳಿದಂತೆ ಕೇಳಿದ್ದೇನೆ. ನಂತರ ಬೆಂಗಳೂರಿಗೆ ಬಂದು ನನ್ನ ನಿವಾಸಕ್ಕೆ ಬಾ ಮಾತನಾಡಬೇಕು ನಿನ್ನ ಕೆಲಸದ ವಿಚಾರ ಎಂದರು. ನಾನು ಅವರ ಹೇಳಿದ್ದ ಅಪಾರ್ಟ್ ಮೆಂಟ್ ಗೆ ಹೋದೆ. ಅವರ ಅಪಾರ್ಟ್‌ಮೆಂಟಲ್ಲೇ 2 ಬಾರಿ ಲೈಂಗಿಕ ಕ್ರಿಯೆ ಮಾಡಿದ್ದಾರೆ. ಅವರಿಗೆ ಎದುರು ಮಾತಾಡಲು ಭಯ ಆಗಿ ಕೇಳಿದ್ದೇನೆ. ಕೊನೆಗೆ ಕೆಲಸ ಕೇಳಿದರೆ ಸ್ವಲ್ಪ ಹಣ ಕೊಡುತ್ತೇನೆ. ಕೆಲಸದ ಕಥೆ ಆಮೇಲೆ ನೋಡೋಣ ಎಂದರು.
ನಾನು ಯಾವಾಗ ಅವರಿಗೆ ನನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು, ಈಗ ಯಾಕೆ ಕೆಲಸ ಕೊಡುತ್ತಿಲ್ಲ ಎಂದು ಕೇಳಿದಾಗ ಸೊಂಟದಲ್ಲಿ ಕುರಿದು ಇಟ್ಟುಕೊಂಡು ಬಂದರೆ ಕೆಲಸ ಕೊಡೋಕೆ ಆಗುತ್ತಾ..? ಎಂದು ಬೈಯ್ದು ಕಳಿಸಿದರು. ಇದಾದ ನಂತರ ಅವರು ನನ್ನೊಂದಿಗೆ ಮಾತನಾಡಿದ ಮತ್ತು ಲೈಂಗಿಕ ಸಂಭೋಗ ನಡೆಸಿದ ಅಶ್ಲೀಲ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನಾನು ಅವರ ವಿರುದ್ಧ ದೂರು ನೀಡದಂತೆ ಈ ರೀತಿ ಕುತಂತ್ರವನ್ನು ರಮೇಶ್ ಜಾರಕಿಹೊಳಿ ಮಾಡಿರುತ್ತಾರೆ. ಹಣವಂತರು, ಪ್ರಭಾವಿಗಳಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೂ ಜೀವ ಬೆದರಿಕೆ ಇದೆ.
ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದುಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸದೇ ಮೋಸ ಮಾಡಿ, ಅಶ್ಲೀಲವಾಗಿ ಬಳಸಿಕೊಂಡು, ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನಾನು ನೇರವಾಗಿ ಯಾವ ಠಾಣೆಗೂ ಬಂದು ದೂರು ನೀಡದಂತೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ, ತೇಜೋವಧೆ ಮಾಡುತ್ತಿದ್ದಾರೆ ಹಾಗೂ ನನಗೆ ಸಹಾಯ ಮಾಡಿದವರಿಗೆ, ಮಾಡುತ್ತಿರುವವರಿಗೆ ಟಾರ್ಗೆಟ್ ಮಾಡಿ ಅವರ ಮನೆ ಮತ್ತು ಕುಟುಂಬಸ್ಥರಿಗೆ ಹಿಂಸೆ ಕೊಡುತ್ತಿರುವುದರಿಂದ ಬಹಳ ನೋವಾಗಿದೆ.
ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡ, ಅವರನ್ನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದು, ತಾವು ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಡಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.